ಮಂಗಳೂರು: ಮಂಗಳೂರು ಬಹಳ ಸಾಮರಸ್ಯದಿಂದ ಇರುವ ನಗರ. ಇತರ ರಾಜ್ಯಗಳಲ್ಲದೆ, ದೇಶ-ವಿದೇಶಗಳಿಂದಲೂ ಬಂದು ಜನರು ಇಲ್ಲಿ ವಾಸಿಸುತ್ತಿದ್ದಾರೆ. ಕಿಡಿಗೇಡಿಗಳ ಇಂತಹ ಕೃತ್ಯದಿಂದ ಮಂಗಳೂರು ಬ್ರ್ಯಾಂಡ್ ಹಾಳಾಗಬಾರದು ಎಂದು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಎನ್. ಹೇಳಿದರು.
ಓದಿ: ಕಾಣಿಕೆ ಹುಂಡಿಗೆ ಕಾಂಡೋಮ್ ಹಾಕಿದ ಪ್ರಕರಣ.. ಸ್ಥಳಕ್ಕೆ ಕಮಿಷನರ್ ಭೇಟಿ, ಪರಿಶೀಲನೆ..
ನಗರದಲ್ಲಿ ಇತ್ತೀಚೆಗೆ ಕೆಲ ಧಾರ್ಮಿಕ ಕೇಂದ್ರಗಳ ಹುಂಡಿಯಲ್ಲಿ ಅನುಚಿತ ವಸ್ತುಗಳು ಹಾಗೂ ಅಸಹ್ಯಕರ ರೀತಿಯಲ್ಲಿ ಬರೆದ ಕಾಗದಗಳನ್ನು ಹಾಕಿದ್ದು ಪೊಲೀಸ್ ಇಲಾಖೆಯ ಗಮನಕ್ಕೆ ಬಂದಿದೆ. ಇದಕ್ಕೆ ಸಂಬಂಧಿಸಿದಂತೆ ನಾಲ್ಕೈದು ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳೂ ದಾಖಲಾಗಿವೆ ಎಂದರು.
ಈ ರೀತಿಯ ಕೃತ್ಯಗಳಲ್ಲಿ ತೊಡಗಿಕೊಂಡವರು ತಕ್ಷಣ ಇದನ್ನು ನಿಲ್ಲಿಸಬೇಕು. ಅಲ್ಲದೆ ಇದಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಪತ್ತೆಹಚ್ಚುವ ಕೆಲಸ ಶೀಘ್ರ ಮಾಡಲಿದ್ದೇವೆ. ಯಾವುದೇ ಧರ್ಮದ ಧಾರ್ಮಿಕ ಕೇಂದ್ರಗಳು ಇರಬಹುದು, ಅಲ್ಲಿನ ಆಡಳಿತ ಸಮಿತಿ ಇಂತಹ ಕಡೆಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸುವುದು. ಸೂಕ್ತವಾದ ಭದ್ರತಾ ವ್ಯವಸ್ಥೆ ನಿಯೋಜಿಸುವ ಕಾರ್ಯ ಮಾಡಬೇಕೆಂದು ಶಶಿಕುಮಾರ್ ಎನ್. ಮನವಿ ಮಾಡಿದರು.
ಸಾರ್ವಜನಿಕರು ಇಂತಹ ಕೃತ್ಯಗಳ ಬಗ್ಗೆ ಮಾಹಿತಿ ಇದ್ದಲ್ಲಿ ಪೊಲೀಸ್ ಇಲಾಖೆ ಅಥವಾ ನೇರವಾಗಿ ನನಗೂ ಮಾಹಿತಿ ನೀಡಬಹುದು. ಈ ಮೂಲಕ ಇಂತಹ ಕೃತ್ಯ ನಡೆಸುವ ಕಿಡಿಗೇಡಿಗಳನ್ನು ಕಾನೂನಿನ ಚೌಕಟ್ಟಿನಲ್ಲಿ ಬಂಧಿಸಲು ಸಹಕಾರಿಯಾಗುತ್ತದೆ. ಸಾರ್ವಜನಿಕರು ಈ ಬಗ್ಗೆ ಮಾಹಿತಿ ಇದ್ದಲ್ಲಿ ಪೊಲೀಸ್ ಕಂಟ್ರೋಲ್ ದೂರವಾಣಿ ಸಂಖ್ಯೆ 9480802300ಗೆ ವಾಟ್ಸ್ಆ್ಯಪ್ ಅಥವಾ ಮೆಸೇಜ್ ಮೂಲಕ ತಿಳಿಸಬಹುದು ಎಂದು ಪೊಲೀಸ್ ಕಮಿಷನರ್ ವಿನಂತಿಸಿಕೊಂಡರು.