ಮಂಗಳೂರು (ದಕ್ಷಿಣ ಕನ್ನಡ): ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ 1986ರ ಕಾಯ್ದೆಯನ್ವಯ ನಿಗದಿಪಡಿಸಿರುವ ಡೆಸಿಬಲ್ ಶಬ್ದಗಳಿಗಿಂತ ಹೆಚ್ಚಿನ ಶಬ್ದ ಮಾಲಿನ್ಯ ಉಂಟು ಮಾಡುವ ಒಟ್ಟು 1,001 ಸ್ಥಳಗಳನ್ನು ಗುರುತಿಸಿ ಮಂಗಳೂರು ಪೊಲೀಸ್ ಆಯುಕ್ತಾಲಯ ನೋಟಿಸ್ ಜಾರಿ ಮಾಡಿದೆ.
ಸಾರ್ವಜನಿಕ ಸ್ಥಳಗಳಲ್ಲಿ ಪರಿಸರ ಅರಣ್ಯ ಸಚಿವಾಲಯದ ನಿರ್ದೇಶನದಂತೆ 1986ರ ಕಾಯ್ದೆಯ ಅನ್ವಯ ನಿಗದಿಪಡಿಸಿರುವ ಡೆಸಿಬಲ್ ಶಬ್ದಗಳಿಗಿಂತ ಹೆಚ್ಚಿನ ಶಬ್ದ ಮಾಡುವ ಧ್ವನಿವರ್ಧಕ ಉಪಯೋಗಿಸಬಾರದೆನ್ನುವ ನಿಯಮವಿದೆ. ಈ ಹಿನ್ನೆಲೆಯಲ್ಲಿ, ನಿಯಮಗಳನ್ನು ಉಲ್ಲಂಘಿಸಬಾರದು ಎನ್ನುವ ಕಾರಣಕ್ಕೆ ನಾಲ್ಕು ವಿಭಾಗಗಳನ್ನಾಗಿಸಿ ನೋಟಿಸ್ ಜಾರಿಗೊಳಿಸಲಾಗಿದೆ. ಇಂಡಸ್ಟ್ರಿಯಲ್, ಕಮರ್ಷಿಯಲ್ ಏರಿಯಾ, ರೆಸಿಡೆನ್ಸಿಯಲ್ ಏರಿಯಾ, ಸೈಲೆನ್ಸ್ ಝೋನ್ ಎಂದು ವಿಭಾಗಿಸಿ ನೋಟಿಸ್ ನೀಡಲಾಗಿದೆ.
ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಧ್ವನಿವರ್ಧಕಗಳನ್ನು ಬಳಸುವ 357 ದೇವಸ್ಥಾನಗಳು, 168 ಮಸೀದಿಗಳು, 95 ಚರ್ಚ್ಗಳು, 106 ಶಿಕ್ಷಣ ಸಂಸ್ಥೆಗಳು, 60 ಕೈಗಾರಿಕಾ ಸ್ಥಳಗಳು, 98 ಮನರಂಜನಾ ಸ್ಥಳಗಳು, 68 ಮದುವೆ ಹಾಲ್ಗಳು, ಕಾರ್ಯಕ್ರಮ ಸ್ಥಳಗಳು, 49 ಸಾರ್ವಜನಿಕ ಸ್ಥಳಗಳು ಸೇರಿದಂತೆ ಒಟ್ಟು 1,001 ವಿವಿಧ ಧಾರ್ಮಿಕ, ಖಾಸಗಿ ಸಂಸ್ಥೆಗಳಿಗೆ ಮಂಗಳೂರು ಪೊಲೀಸ್ ಆಯುಕ್ತಾಲಯ ನೋಟಿಸ್ ಜಾರಿ ಮಾಡಿದೆ.
ಇದನ್ನೂ ಓದಿ: ಮೋದಿ-ಬೊಮ್ಮಾಯಿಯಿಂದ ಬೆಲೆ ಏರಿಕೆ ಕಂಟ್ರೋಲ್.. ನಮೋ ಇರದಿದ್ರೇ ಪೆಟ್ರೋಲ್-ಡೀಸೆಲ್ ₹200ಆಗ್ತಿತ್ತು.. ಸಚಿವ ನಿರಾಣಿ
ಈ ಬಗ್ಗೆ ಮಂಗಳೂರು ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಮಾತನಾಡಿ, ನಿನ್ನೆಯಿಂದ ಈ ನೋಟಿಸ್ ಜಾರಿಗೊಳಿಸಲಾಗಿದೆ. ಅದಾಗ್ಯೂ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿಗೆ ಶಬ್ದ ಮಾಲಿನ್ಯವಾದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಅಲ್ಲದೇ ಮಸೀದಿ ಹಾಗೂ ಆಜಾನ್ ಅನ್ನು ಗುರಿಯಾಗಿರಿಸಿಕೊಂಡು ಈ ಕಾನೂನು ಜಾರಿಗೊಳಿಸಲಾಗುತ್ತಿದೆ ಎಂಬ ಗೊಂದಲಮಯ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ಕೇಳಿ ಬರುತ್ತಿದೆ. ಆದರೆ ಯಾವುದೇ ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿಕೊಂಡು ಮಾಡಿರುವ ಕಾನೂನಲ್ಲ ಎಂದು ತಿಳಿಸಿದರು.