ಮಂಗಳೂರು: "ಪ್ರತೀ ಹತ್ಯೆಯಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಸಂಘಟನೆಯನ್ನು ಸಿಲುಕಿಸುವ ಪ್ರಯತ್ನಗಳು ನಡೆಯುತ್ತಿವೆ" ಎಂದು ಸಂಘಟನೆಯ ಜಿಲ್ಲಾಧ್ಯಕ್ಷ ಇಜಾಜ್ ಅಹಮದ್ ಆರೋಪಿಸಿದರು. ಮಂಗಳೂರಿನಲ್ಲಿ ಮಾತನಾಡಿದ ಅವರು, "ನಮ್ಮ ಸಂಘಟನೆಯ ಮೇಲೆ ಗೂಬೆ ಕೂರಿಸುವ ಪಿತೂರಿ ನಡೆಯುತ್ತಿದೆ. ಕೊಲೆ ಆರೋಪಿಗಳು ಪಿಎಫ್ಐ ಸದಸ್ಯರೇ ಎಂಬುದನ್ನು ಪರಿಶೀಲಿಸದೆ ವ್ಯವಸ್ಥಿತವಾಗಿ ಪಿಎಫ್ಐ ತಲೆಗೆ ಕಟ್ಟುವ ಪ್ರಯತ್ನಗಳಾಗುತ್ತಿದೆ" ಎಂದರು.
"ಸರಕಾರದ ಸಂತೃಪ್ತಿಗಾಗಿ ಪೊಲೀಸ್ ಇಲಾಖೆ ಅಮಾಯಕರನ್ನು ಬಲಿಪಶು ಮಾಡುತ್ತಿದೆ. ಮಸೂದ್ ಹತ್ಯೆ ಹಾಗೂ ಪ್ರವೀಣ್ ನೆಟ್ಟಾರು ಹತ್ಯೆಯನ್ನು ಒಂದೇ ರೀತಿಯಲ್ಲಿ ಮಾಧ್ಯಮಗಳು, ಸರಕಾರ, ಪೊಲೀಸ್ ಇಲಾಖೆ ನೋಡದೆ ಪ್ರವೀಣ್ ಹತ್ಯೆಯನ್ನು ವೈಭವೀಕರಿಸುತ್ತಿವೆ. ಆರೋಪಿಯೊಬ್ಬ ಅಪರಾಧಿ ಎಂದು ಸಾಬೀತಾಗುವ ಮೊದಲೇ ಆತನನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುತ್ತಾರೆ" ಎಂದು ದೂರಿದರು.
ಪಿಎಫ್ಐ ಸದಸ್ಯರೆಂಬ ಮಾಹಿತಿ ಇಲ್ಲ: ಪಿಎಫ್ಐ ರಾಜ್ಯ ಕಾರ್ಯದರ್ಶಿ ಅಶ್ರಫ್ ಎ.ಕೆ ಮಾತನಾಡಿ, "ಪ್ರವೀಣ್ ನೆಟ್ಟಾರು ಹತ್ಯೆಯಲ್ಲಿ ಆರೋಪಿ ಶಫೀಕ್‌ನನ್ನು ಪಿಎಫ್ಐ ಕಾರ್ಯಕರ್ತ ಎಂದು ಬಿಂಬಿಸಲಾಗುತ್ತಿದೆ. ಆದರೆ ಆತ ಪಿಎಫ್ಐ ಸದಸ್ಯನೆಂಬ ಮಾಹಿತಿ ಇಲ್ಲ. ಆತನ ಪತ್ನಿ, ಶಫೀಕ್ ಪಿಎಫ್ಐ ಸದಸ್ಯನೆಂದು ಹೇಳಿರುವುದನ್ನು ನೋಡಿದ್ದೇವೆ. ಆದರೆ ದ.ಕ.ಜಿಲ್ಲೆಯಲ್ಲಿ 10 ಸಾವಿರಕ್ಕೂ ಅಧಿಕ ಮಂದಿ ಕಾರ್ಯಕರ್ತರಿದ್ದು, ಈತ ಸಂಘಟನೆಯ ಕಾರ್ಯಕರ್ತನೇ? ಎಂಬುದನ್ನು ಪರಿಶೀಲಿಸಬೇಕಾಗಿದೆ" ಎಂದರು.
ಇದನ್ನೂ ಓದಿ: ಪ್ರವೀಣ್ ನೆಟ್ಟಾರು ಕೊಲೆ: ಆರೋಪಿಗಳಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ