ಮಂಗಳೂರು: ಕಳೆದ 15 ದಿನಗಳಿಂದ ನಯರ ಎನರ್ಜಿ ಕಂಪನಿ ಬೇಡಿಕೆಗನುಸಾರ ತೈಲ ಪೂರೈಕೆ ಮಾಡುತ್ತಿಲ್ಲ. ಪರಿಣಾಮ, ಸಂಕಷ್ಟಕ್ಕೊಳಗಾಗಿರುವ ಪೆಟ್ರೋಲ್ ಬಂಕ್ ಮಾಲೀಕರು ವ್ಯಾಪಾರ ವಹಿವಾಟನ್ನು ಸ್ಥಗಿತಗೊಳಿಸಿದ್ದಾರೆ. ಹೀಗಾಗಿ, ಕೂಡಲೇ ತೈಲ ಸರಬರಾಜು ಪ್ರಾರಂಭಿಸಬೇಕೆಂದು ಆಗ್ರಹಿಸಿ ತಣ್ಣೀರು ಬಾವಿಯ ಬೀಚ್ ರಸ್ತೆಯಲ್ಲಿ ನೂರಾರು ಖಾಸಗಿ ಬಂಕ್ ಮಾಲೀಕರು ಪ್ರತಿಭಟನೆ ನಡೆಸಿದರು.
ನಯರ ಎನರ್ಜಿ ಕಂಪನಿಯಿಂದ ಮಾನ್ಯತೆ ಪಡೆದಿರುವ 500-600 ಪೆಟ್ರೋಲ್ ಬಂಕ್ಗಳು ರಾಜ್ಯಾದ್ಯಂತ ಕಾರ್ಯಾಚರಿಸುತ್ತಿವೆ. ಬಂಕ್ ಮಾಲೀಕರು ಸಾಲ ಮಾಡಿ 1-2 ಕೋಟಿ ರೂ. ಬಂಡವಾಳ ಹೂಡಿ ವ್ಯಾಪಾರ ಆರಂಭಿಸಿದ್ದಾರೆ. ಆದರೆ ಈಗ ಡೀಲರ್ಗಳು ಹಣ ಪಾವತಿಸಿ ತೈಲಕ್ಕೆ ಆರ್ಡರ್ ಮಾಡಿದ್ದರೂ ಕೂಡ ತೈಲ ಪೂರೈಕೆ ಮಾಡುತ್ತಿಲ್ಲ. ಲಕ್ಷಾಂತರ ಲೀಟರ್ ತೈಲ ಸಂಗ್ರಹ ಮಾಡಿ ಇಟ್ಟುಕೊಳ್ಳಲಾಗಿದೆ ಎಂದು ಮಾಲೀಕರು ಆರೋಪಿಸಿದರು.
ನಯರ ಎನರ್ಜಿ ಕಂಪನಿಯು ಪೆಟ್ರೋಲ್ ಬಂಕ್ ಮಾಡಲು ನಮ್ಮೊಂದಿಗೆ 30 ವರ್ಷಗಳ ಒಪ್ಪಂದ ಮಾಡಿಕೊಂಡಿದ್ದಾರೆ. ಇದೀಗ ಒಂದು ವರ್ಷಕ್ಕೆ ಹೀಗೆ ಕೈಕೊಟ್ಟರೆ ಮುಂದಿನ 29 ವರ್ಷ ಇವರೊಂದಿಗೆ ಹೇಗೆ ವ್ಯಾಪಾರ ಮಾಡೋದು. ರಾಜ್ಯಾದ್ಯಂತ 500-600 ಬಂಕ್ ಮಾಲೀಕರು ನಯರ ಕಂಪನಿಯನ್ನೇ ನಂಬಿಕೊಂಡಿದ್ದಾರೆ. ಎಲ್ಲಾ ಡೀಲರ್ಗಳು ಕಂಪನಿಗೆ ಹಣ ನೀಡಿದರೂ ಇನ್ನೂ ಇಂಧನ ಪೂರೈಕೆಯಾಗಿಲ್ಲ. ಇದರಿಂದ ಪೆಟ್ರೋಲ್ ಬಂಕ್ ಮಾಲೀಕರು ಮಾತ್ರವಲ್ಲದೆ, ನೂರಾರು ಕೆಲಸಗಾರರು, ಸಾರ್ವಜನಿಕರಿಗೂ ತೊಂದರೆಯಾಗಿದೆ ಎಂದು ಅಸಮಾಧಾನ ಹೊರಹಾಕಿದರು.
ನಾವು ಯಾವುದೇ ತೊಂದರೆ ಕೊಡದೆ ಕಂಪನಿಯೊಂದಿಗೆ ವ್ಯವಹಾರ ನಡೆಸುತ್ತಿದ್ದರೂ ಕೂಡ ನಯರ ಕಂಪನಿ ನಮಗೆ ಈ ರೀತಿಯಲ್ಲಿ ತೊಂದರೆ ನೀಡುತ್ತಿದೆ. ನಾವು ಹಣ ನೀಡಿದ್ದರೂ ಯಾವುದೇ ಕಾರಣವಿಲ್ಲದೆ ಏಕಾಏಕಿ ಇಂಧನ ಪೂರೈಕೆ ಸ್ಥಗಿತಗೊಳಿಸಿದೆ. ಕಂಪನಿ ನಮ್ಮನ್ನು ಪಾಲುದಾರರಂತೆ ನೋಡದೆ ಗುಲಾಮರಂತೆ ನೋಡುತ್ತಿದೆ. ಆದ್ದರಿಂದ ಜಿಲ್ಲಾಧಿಕಾರಿಯವರು ಮಧ್ಯಪ್ರವೇಶಿಸಿ ಅಕ್ರಮವಾಗಿ ತೈಲ ದಾಸ್ತಾನು ಮಾಡಿರುವ ಕಂಪನಿ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ: 'ಶ್ರೀ ಶಿವಕುಮಾರ ಸ್ವಾಮೀಜಿ ಅಸಂಖ್ಯಾತ ಜನರ ಹೃದಯದಲ್ಲಿ ಅಮರ': ಕನ್ನಡದಲ್ಲೇ ಟ್ವೀಟ್ ಮಾಡಿ ಮೋದಿ ನಮನ