ಮಂಗಳೂರು: ಚೆಕ್ ಅಮಾನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನ ನಾಲ್ಕನೇ ಜೆಎಂಎಫ್‌ಸಿ ನ್ಯಾಯಾಲಯ ಆರೋಪಿಗೆ 6 ಕೋಟಿ ರೂ. ದಂಡ ವಿಧಿಸಿ ಆದೇಶಿಸಿದೆ. ಮಂಗಳೂರಿನ ಬಲ್ಲಾಳ್‌ಬಾಗ್ ನಿವಾಸಿ ಅನಿಲ್ ಹೆಗ್ಡೆ ಎಂಬವರಿಗೆ ಈ ದಂಡ ವಿಧಿಸಲಾಗಿದೆ.
ಅನಿಲ್ ಹೆಗ್ಡೆ ಅವರು ಮಂಗಳೂರಿನ ಪದವಿನಂಗಡಿಯ ಮುಗ್ರೋಡಿಯ ಡ್ಯಾನಿ ಆಂಟನಿ ಪಾವ್ಲ್ ಅವರಿಗೆ 5,15,73,798 ರೂಪಾಯಿಯನ್ನು ವ್ಯವಹಾರಕ್ಕೆ ಸಂಬಂಧಿಸಿದಂತೆ ಪಾವತಿ ಮಾಡಬೇಕಾಗಿತ್ತು. ಈ ಮೊತ್ತವನ್ನು ಡ್ಯಾನಿ ಅವರಿಗೆ ನೀಡಲು ಅನಿಲ್ ಹೆಗ್ಡೆ 3 ಕೋಟಿ ರೂ. ಹಾಗೂ 2 ಕೋಟಿ 15 ಲಕ್ಷದ 73 ಸಾವಿರದ 978 ರೂಪಾಯಿ ಮೊತ್ತದ ಚೆಕ್‌ಗಳನ್ನು ನೀಡಿದ್ದರು. ಈ ಚೆಕ್‌ಗಳನ್ನು ಬ್ಯಾಂಕಿಗೆ ಹಾಕಿದಾಗ ಬೌನ್ಸ್ ಆಗಿದ್ದವು. ಈ ಹಿನ್ನೆಲೆ, ಡ್ಯಾನಿ ಅವರು ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು.
ವಿಚಾರಣೆ ನಡೆಸಿದ ಜೆಎಂಎಫ್‌ಸಿ 4ನೇ ನ್ಯಾಯಲಯವು ಅನಿಲ್ ಹೆಗ್ಡೆಗೆ 6,08,57,000 ರೂಪಾಯಿ ದಂಡ ವಿಧಿಸಿದೆ. ದಂಡದ ಮೊತ್ತ ಪಾವತಿ ಮಾಡಲು ತಪ್ಪಿದರೆ ಆರೋಪಿಯು ಎರಡು ವರ್ಷಗಳ ಸಾದಾ ಸಜೆ ಅನುಭವಿಸಬೇಕೆಂದು ನ್ಯಾಯಾಲಯ ಆದೇಶಿಸಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಸದ್ಯಕ್ಕೆ ಲಾಕ್ಡೌನ್ ಪ್ರಶ್ನೆಯೇ ಇಲ್ಲ: ಸಚಿವ ಆರ್. ಅಶೋಕ್
ದಂಡದ ಮೊತ್ತದಲ್ಲಿ 6,08,50,000 ರೂ.ಗಳನ್ನು ದೂರುದಾರ ಡ್ಯಾನಿ ಅವರಿಗೆ ಹಾಗೂ 7,000 ರೂ.ನ್ನು ನ್ಯಾಯಾಲಯದ ವೆಚ್ಚವಾಗಿ ಪಾವತಿ ಮಾಡಬೇಕೆಂದು ನ್ಯಾಯಾಲಯ ಆದೇಶಿಸಿದೆ. ದೂರುದಾರರ ಪರವಾಗಿ ನ್ಯಾಯವಾದಿ ಎಂ.ಪಿ. ಶೆಣೈ ವಾದ ಮಂಡಿಸಿದ್ದರು.