ಪುತ್ತೂರು(ದಕ್ಷಿಣಕನ್ನಡ): ತಾಲೂಕಿನ ಪಾಂಗಳಾಯಿ ಗ್ರಾಮದ ಜನರು ಕಳೆದ 40 ವರ್ಷಗಳಿಂದ ಮಣ್ಣಿನ ರಸ್ತೆಯಲ್ಲಿಯೇ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಶೀಘ್ರ ಸರಿಯಾದ ರಸ್ತೆ ನಿರ್ಮಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.
ಈ ಕಚ್ಚಾ ರಸ್ತೆಯನ್ನ ಸುಮಾರು 13ಕ್ಕೂ ಅಧಿಕ ಮನೆಗಳು ಅವಲಂಬಿಸಿದ್ದು, ಮಕ್ಕಳು, ಹಿರಿಯ ನಾಗರೀಕರು ನಿತ್ಯ ಕಷ್ಟಪಟ್ಟು ಓಡಾಡುವ ಸ್ಥಿತಿ ನಿರ್ಮಾಣವಾಗಿದೆ. ರಸ್ತೆಯು ಏರುಪೇರುಗಳಿಂದ ಕೂಡಿದ್ದು, ನಾಲ್ಕು ಚಕ್ರಗಳ ವಾಹನಗಳು ಓಡಾಡಲು ಸಾಧ್ಯವಾಗುತ್ತಿಲ್ಲ. ಇದರಿಂದ ಅನಾರೋಗ್ಯ ಪೀಡಿತರಿಗೆ, ಗರ್ಭಿಣಿ ಸ್ತ್ರೀಯರಿಗೆ ಹಾಗೂ ಹಿರಿಯ ನಾಗರೀಕರಿಗೆ ಸಾಕಷ್ಟು ತೊಂದರೆ ಉಂಟಾಗುತ್ತಿದೆ.
ಮಳೆಗಾಲದಲ್ಲಂತೂ ಈ ರಸ್ತೆಯಲ್ಲಿ ಸಂಚರಿಸುವುದೇ ಅಸಾಧ್ಯ. ಇಲ್ಲಿನ ಜನತೆ ಕಳೆದ 40 ವರ್ಷಗಳಿಂದಲೂ ಈ ರಸ್ತೆಯನ್ನು ಸರಿಪಡಿಸುವಂತೆ ಜನಪ್ರತಿನಿಧಿಗಳಿಗೆ, ಪುರಸಭೆ, ನಗರಸಭೆ ಅಧಿಕಾರಿಗಳಿಗೆ ಸಾಕಷ್ಟು ಭಾರಿ ಮನವಿ ಮಾಡಿದ್ದರೂ, ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಇಲ್ಲಿನ ಜನತೆ ಬೇಸತ್ತು ಹೋಗಿದ್ದು, ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.