ಮಂಗಳೂರು: ಪಣಂಬೂರು ಕಡಲ ತೀರದಲ್ಲಿ ಸಮುದ್ರ ಪಾಲಾಗುತ್ತಿದ್ದ ವ್ಯಕ್ತಿಯನ್ನು ಪಣಂಬೂರು ಲೈಫ್ ಗಾರ್ಡ್ ಸಿಬ್ಬಂದಿ ರಕ್ಷಿಸಿದೆ.
ಬಳ್ಳಾರಿಯ ನಾಲ್ಕು ಜನರ ತಂಡ ಇಂದು ಪಣಂಬೂರು ಕಡಲ ತೀರಕ್ಕೆ ಮೋಜು ಮಾಡಲು ಬಂದಿತ್ತು. ಸಮುದ್ರ ನೀರಿನಲ್ಲಿ ಆಟವಾಡುತ್ತಿದ್ದಾಗ ಬಳ್ಳಾರಿ ಹೊಸಪೇಟೆಯ ಅಜಿತ್ (42) ಎಂಬವರು ಸಮುದ್ರದ ಸೆಳೆತಕ್ಕೆ ಸಿಲುಕಿದ್ದರು. ಇದನ್ನು ಗಮನಿಸಿದ ಪಣಂಬೂರು ಜೀವರಕ್ಷಕ ದಳದ ಸಿಬ್ಬಂದಿ ಕಡಲಿಗಿಳಿದು ಅಜಿತ್ ಅವರನ್ನು ರಕ್ಷಿಸಿದ್ದಾರೆ.
ಪಣಂಬೂರು ಬೀಚ್ ಟೂರಿಸಂ ಡೆವಲಪ್ಮೆಂಟ್ ಪ್ರಾಜೆಕ್ಟ್ ಅಡಿ ನುರಿತ ಈಜುಗಾರರಾದ ಪಣಂಬೂರು ಜೀವರಕ್ಷಕ ದಳದ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದರು. ಜಿಲ್ಲಾಡಳಿತದೊಂದಿಗೆ ಪಣಂಬೂರು ಬೀಚ್ ಟೂರಿಸಂ ಡೆವಲಪ್ಮೆಂಟ್ ಪ್ರಾಜೆಕ್ಟ್ ಒಡಂಬಡಿಕೆ ನಿನ್ನೆಗೆ ಕೊನೆಗೊಂಡಿದೆ. ಇದರಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಜೀವರಕ್ಷಕ ದಳದ ಸಿಬ್ಬಂದಿ ತಮ್ಮ ಸಾಮಗ್ರಿಗಳನ್ನು ಮರಳಿ ಕೊಂಡೊಯ್ಯಲು ಬಂದಾಗ ಸಮುದ್ರದಲ್ಲಿ ವ್ಯಕ್ತಿ ಸಿಲುಕಿರುವುದು ತಿಳಿದು ಬಂದು ರಕ್ಷಿಸಿದ್ದಾರೆ.
ಈಗಾಗಲೇ ಜೀವರಕ್ಷಕ ಸಿಬ್ಬಂದಿ ಪಣಂಬೂರು ಕಡಲ ತೀರದಲ್ಲಿ 350 ಕ್ಕೂ ಅಧಿಕ ಜನರನ್ನು ರಕ್ಷಿಸಿದ್ದಾರೆ ಎಂದು ಪಣಂಬೂರು ಬೀಚ್ ಟೂರಿಸಂ ಡೆವಲಪ್ಮೆಂಟ್ ಪ್ರಾಜೆಕ್ಟ್ನ ಸಿಇಒ ಯತೀಶ್ ಬೈಕಂಪಾಡಿ ತಿಳಿಸಿದ್ದಾರೆ.