ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೊಂದು ಕೊರೊನಾ ಸೋಂಕು ಪ್ರಕರಣ ದೃಢಪಟ್ಟಿದ್ದು, ಈ ಮೂಲಕ ಜಿಲ್ಲೆಯಲ್ಲಿ ಕೊರೊನಾ ಪೀಡಿತರ ಸಂಖ್ಯೆ ಏಳಕ್ಕೇರಿದೆ.
ಬಂಟ್ವಾಳ ತಾಲೂಕಿನ ಸಜಿಪನಡು ಗ್ರಾಮದ 10 ತಿಂಗಳ ಮಗುವಿನಲ್ಲಿ ಇಂದು ಕೊರೊನಾ ಸೋಂಕು ದೃಢಪಟ್ಟ ಬೆನ್ನಲ್ಲೇ, ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕರಾಯ ಗ್ರಾಮದ 21 ವರ್ಷದ ಯುವಕನಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಮೂಲಕ ಜಿಲ್ಲೆಯಲ್ಲಿ ಮತ್ತಷ್ಟು ಆತಂಕ ಮೂಡುತ್ತಿದೆ.
ಸೋಂಕಿತನ ಚಲನವಲನದ ವಿವರ:
ಮಾರ್ಚ್ 21ರಂದು ದುಬೈಯಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿದ್ದ ಯುವಕ. ಬೆಂಗಳೂರಿನಿಂದ ಕೆಎಸ್ಆರ್ ಟಿಸಿ ಬಸ್ ಮೂಲಕ ತನ್ನ ಸ್ವಗ್ರಾಮಕ್ಕೆ ಆಗಮನ. ಅನಾರೋಗ್ಯದ ಹಿನ್ನೆಲೆಯಲ್ಲಿ ಮಾರ್ಚ್ 24ರಂದು ಪುತ್ತೂರಿನ ಆಸ್ಪತ್ರೆ ದಾಖಲು. ಗಂಟಲು ದ್ರವವನ್ನು ತಪಾಸಣೆಗೆ ರವಾನೆ ಮಾಡಲಾಗಿತ್ತು. ಸದ್ಯ ವರದಿ ಬಂದಿದ್ದು, ಕೊರೊನಾ ಪಾಸಿಟಿವ್ ಎಂದು ದೃಢಪಟ್ಟಿದೆ. ಸದ್ಯ ವ್ಯಕ್ತಿಯನ್ನು ಸಂಪರ್ಕಿಸಿರುವ ಜನರ ಪತ್ತೆ ಕಾರ್ಯ ನಡೆಯುತ್ತಿದೆ.