ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆಯಿಂದ ಮಣ್ಣಗುಡ್ಡೆಯ ಓಣಿ ರಸ್ತೆಯೊಂದಕ್ಕೆ ಕಾಂಕ್ರೀಟಿಕರಣ ಮಾಡುವ ವೇಳೆ ವೃದ್ಧೆಯೊಬ್ಬರು ನಡು ರಸ್ತೆಯಲ್ಲೇ ಮಲಗಿ ಅಡ್ಡಿಪಡಿಸಿರುವ ಘಟನೆ ಮಣ್ಣಗುಡ್ಡ ಗುರ್ಜಿ ಬಳಿ ನಡೆದಿದೆ. ಬಳಿಕ ಕಾಮಗಾರಿಗೆ ಅಡ್ಡಿಪಡಿಸಿದ ವೃದ್ಧೆ ವೈಲೇಟ್ ಪಿರೇರಾ ಅವರನ್ನು ಬಲವಂತದಿಂದ ಆ್ಯಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಸಾಗಿಸಲಾಗಿದೆ.
ಮಂಗಳೂರು ಮಹಾನಗರಪಾಲಿಕೆ ವತಿಯಿಂದ ಮಣ್ಣಗುಡ್ಡೆಯ ಗುರ್ಜಿಯ ವಾರ್ಡ್ ನಂ.28ರಲ್ಲಿ ಮೂರು ಮನೆಗಳನ್ನು ಸಂಪರ್ಕಿಸುವ ಓಣಿ ರಸ್ತೆಗೆ ಕಾಂಕ್ರೀಟಿಕರಣ ನಡೆಸಲಾಗುತ್ತಿತ್ತು. ಈ ವೇಳೆ ವೃದ್ಧೆ ವೈಲೇಟ್ ಪಿರೇರಾ,ಇದು ನನ್ನ ಖಾಸಗಿ ಜಾಗ, ಇಲ್ಲಿ ಬಲವಂತವಾಗಿ ಪಾಲಿಕೆ ಕಾಂಕ್ರೀಟಿಕರಣ ಮಾಡುತ್ತಿದೆ ಎಂದು ಆರೋಪಿಸಿ ಪ್ರತಿಭಟಿಸಿ ಕಾಮಗಾರಿಗೆ ತಡೆಯೊಡ್ಡಿದ್ದಾರೆ.
ಕಾಮಗಾರಿಯ ಆದೇಶ ಪತ್ರ ತನ್ನಿ ಎಂದು ಈ ವೃದ್ದೆ ಒತ್ತಾಯಿಸಿದ್ದು, ಈ ಕಾಮಗಾರಿಯಿಂದ ತನ್ನ ಮನೆಯ ಅಂಗಳಕ್ಕೆ ನೀರು ನುಗ್ಗುತ್ತಿದೆ ಎಂದು ಆರೋಪಿಸಿದ್ದಾರೆ. ಬಳಿಕ ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ವೃದ್ಧೆಯ ಮನವೊಲಿಸಲು ಪ್ರಯತ್ನಿಸಿದರಾದರೂ ಸಫಲವಾಗಲಿಲ್ಲ. ಬಳಿಕ ಆಗಮಿಸಿದ ಪೊಲೀಸರು ಆ್ಯಂಬುಲೆನ್ಸ್ ಕರೆಸಿ ವೃದ್ಧೆಯನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ.
ಓದಿ : ಮೂರು ಬಾರಿ ಕಟ್ಟಿದ್ರು, ಮತ್ತೆ ಕುಸಿತ.. ಬೆಳ್ಳೂಡಿ-ರಾಮತೀರ್ಥ ಸೇತುವೆಗೆ ಬೇಕಿದೆ ಕಾಯಕಲ್ಪ