ನೆಲ್ಯಾಡಿ: ಸೆಲ್ಫಿ ತೆಗೆಯಲು ಹೋಗಿ ನೀರಿಗೆ ಬಿದ್ದ ಯುವಕ ಕಾಣೆಯಾಗಿ (Young man missing case in Gundya) ನಾಲ್ಕು ದಿನಗಳು ಕಳೆದರೂ ಯುವಕನನ್ನು ಪತ್ತೆ ಹಚ್ಚಲು ಸಾಧ್ಯವಾಗದ ಕಾರಣ ಅಗ್ನಿಶಾಮಕ ದಳ, ಅಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 78ರ ಗುಂಡ್ಯ (Gundya) ಸಮೀಪ ವಾಹನಗಳ ಬಿಡಿ ಭಾಗಗಳನ್ನು ಸಾಗಾಟ ಮಾಡುತ್ತಿದ್ದ ರಾಜಸ್ಥಾನ ಮೂಲದ ಇಬ್ಬರು ಯುವಕರಲ್ಲಿ ಸೀತಾರಾಮ್ ಎಂಬ ಯುವಕ ನದಿಯ ಬಂಡೆ ಮೇಲೆ ನಿಂತು ಸೆಲ್ಫಿ ತೆಗೆಯಲು ಹೋಗಿ ಕಾಲು ಜಾರಿ ನದಿಗೆ ಬಿದ್ದು ಕಣ್ಮರೆಯಾಗಿ ನಾಲ್ಕು ದಿನಗಳು ಕಳೆದರೂ ಪತ್ತೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಅಗ್ನಿಶಾಮಕ ದಳದ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಳಗ್ಗೆ ಇಲ್ಲಿಗೆ ಆಗಮಿಸುವ ಅಗ್ನಿಶಾಮಕ ದಳದ ಸಿಬ್ಬಂದಿ ನದಿಗಿಳಿದು ಹುಡುಕಾಟ ನಡೆಸದೇ, ಬಂಡೆಗಳ ಮೇಲೆ ಬಂದು ಕುಳಿತು ಸ್ಥಳೀಯರ ಕೈಯಲ್ಲೇ ಹುಡುಕಾಟ ನಡೆಸಿ, ವಾಪಸ್ ತೆರಳುತ್ತಿದ್ದಾರೆ. ಕನಿಷ್ಟ ಪಕ್ಷ ತಮ್ಮಲ್ಲಿರುವ ಜಾಕೆಟ್‌ಗಳು ಅಥವಾ ಸುರಕ್ಷತಾ ಸಾಮಾಗ್ರಿಗಳನ್ನು ನದಿಯಲ್ಲಿ ಮುಳುಗಿ ಕಾರ್ಯಾಚರಣೆ ಮಾಡುತ್ತಿರುವ ಸ್ಥಳೀಯರಿಗೆ ನೀಡದೇ ಅಮಾನವೀಯವಾಗಿ ವರ್ತಿಸುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಇದನ್ನೂ ಓದಿ: ಹನೂರಿನಲ್ಲಿ ನಿರಂತರ ಮಳೆಗೆ 6,450 ಎಕರೆ ಬೆಳೆ ಹಾನಿ: ಸಂಕಷ್ಟದಲ್ಲಿ ರೈತರು
ಅತ್ಯಂತ ಅಪಾಯ ಪ್ರದೇಶವಾದ ಇಲ್ಲಿ ಸ್ಥಳೀಯರು ನದಿಗಿಳಿದು ಯುವಕನಿಗಾಗಿ ತಮ್ಮ ಜೀವದ ಹಂಗು ತೊರೆದು ಹುಡುಕುತ್ತಿರುವಾಗ ಕನಿಷ್ಟ ಪಕ್ಷ ಅಗ್ನಿಶಾಮಕ ದಳದ ನೆರವಾದರೂ ಬೇಕಿತ್ತು ಎಂಬುದು ಸ್ಥಳೀಯರ ಮಾತಾಗಿದೆ. ಈ ನಡುವೆ ಮುಳುಗು ತಜ್ಞರೆಂದು ಆಗಮಿಸಿದ ವ್ಯಕ್ತಿಗಳು ನದಿಗಿಳಿಯದೇ ಹಣ ಪಡೆದು ಹೋಗಿದ್ದಾರೆ ಎನ್ನುವ ಆರೋಪಗಳು ಕೇಳಿಬಂದಿದೆ.