ಮಂಗಳೂರು: ಮೇಕೆದಾಟು ಪಾದಯಾತ್ರೆ ಎಂಬುದು ಕಾಂಗ್ರೆಸ್ನ ಹೀನ ರಾಜಕಾರಣ. ಕೋವಿಡ್ ಒಂದನೇ, ಎರಡನೇ ಅಲೆ ಬಂದಾಗ ಕಾಂಗ್ರೆಸ್ ಟೀಕೆ ಮಾಡಿದ್ದನ್ನು ಬಿಟ್ಟರೆ ಯಾವ ಕಾರ್ಯವನ್ನು ಮಾಡಿಲ್ಲ. ಜನರನ್ನು ದಾರಿತಪ್ಪಿಸುವ ಕೆಲಸ ಮಾಡಿದ್ದರು. ಕಾಂಗ್ರೆಸ್ ಜನರನ್ನು ಕೊಲ್ಲುವ ಕಾರ್ಯ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆಕ್ರೋಶ ವ್ಯಕ್ತಪಡಿಸಿದರು.
ಈ ಹಿಂದೆ ಕಾಂಗ್ರೆಸ್ ಸರ್ಕಾರ ಇತ್ತು. ಆಗ ಯಾಕೆ ಮೇಕೆದಾಟು ಬಗ್ಗೆ ಚರ್ಚೆಯಾಗಿಲ್ಲ. ಬಿಜೆಪಿ ಸರ್ಕಾರ ಸಂಪೂರ್ಣ ಬದ್ಧತೆ ಹೊಂದಿದ್ದು, ಈಗಾಗಲೇ ಅದಕ್ಕೆ ಬೇಕಾದ ಎಲ್ಲ ವ್ಯವಸ್ಥೆಯನ್ನು ಮಾಡಿದೆ. ಮೇಕೆದಾಟು ಯೋಜನೆಯನ್ನ ನಾವು ಮಾಡಿಯೇ ಮಾಡುತ್ತೇವೆ.
ಅದಕ್ಕೆ ಕಾಂಗ್ರೆಸ್ ನವರ ಪಾದಯಾತ್ರೆ ಅಗತ್ಯವಿಲ್ಲ. ಅವರು ರಾಜಕೀಯ ಲಾಭಕ್ಕೋಸ್ಕರ ನಾಟಕ ಮಾಡುತ್ತಿದ್ದಾರೆ. ಅಲ್ಲದೇ ಪಾದಯಾತ್ರೆ ಮಾಡಿ ಕೊರೊನಾವನ್ನು ಹೆಚ್ಚು ಮಾಡಲು ಹೋಗುತ್ತಿದ್ದಾರೆ ಎಂದು ಹೇಳಿದರು.
ಹಿಂದೂ ವಿರೋಧಿ ನೀತಿ ತಳೆದ ಕಾಂಗ್ರೆಸ್:
ಸಿಎಂ ಬಸವರಾಜ ಬೊಮ್ಮಾಯಿ ಅವರು ದೇವಾಲಯಗಳಿಗೆ ಸ್ವಾಯತ್ತತೆ ನೀಡುವ ಯೋಜನೆಗೆ ಕಾಂಗ್ರೆಸ್ ರಾಜಕಾರಣ ಮಾಡುವ ಪ್ರಯತ್ನ ಮಾಡುತ್ತಿದೆ. ಕಾಂಗ್ರೆಸ್ ಸಂಪೂರ್ಣವಾಗಿ ಹಿಂದೂ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ.
ಮತಾಂತರ, ಸಿಎಎ, ಹಿಂದೂ ದೇವಸ್ಥಾನಗಳಿಗೆ ಸ್ವಾಯತ್ತತೆ ಈ ಎಲ್ಲದಕ್ಕೂ ವಿರೋಧಿಸುವ ಕಾರ್ಯ ಮಾಡುತ್ತಿದೆ. ಅವರು ಅಲ್ಪಸಂಖ್ಯಾತರ ಮತದ ಆಸೆಯಿಂದ ಇಡಿ ಹಿಂದೂ ಸಮಾಜಕ್ಕೆ ದ್ರೋಹ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಹಿಂದೂ ಸಮಾಜವನ್ನು ಒಡೆದು ಆಳುವ ಕೆಲಸವನ್ನು ಕಾಂಗ್ರೆಸ್ ಮಾಡಿತ್ತು. ಈಗ ಮತ್ತೊಮ್ಮೆ ಹಿಂದೂ ಸಮಾಜಕ್ಕೆ ಠಕ್ಕರ್ ಕೊಡುವ ಕೆಲಸವನ್ನು ಮಾಡುತ್ತಿದೆ. ಕಾಂಗ್ರೆಸ್ಗೆ ಹಿಂದೂ ಸಮಾಜ, ಧರ್ಮದ ಮೇಲೆ ನಂಬಿಕೆಯಿಲ್ಲ. ಆದರೆ, ಸಮಾಜ ಸಮಾಜವನ್ನು ಒಡೆಯುವ ಮೂಲಕ ಕೇವಲ ಹಿಂದೂಗಳ ಮತ ಬ್ಯಾಂಕ್ ಮೇಲೆ ಮಾತ್ರ ಆಸೆ ಹೊಂದಿದೆ. ಆದ್ದರಿಂದ ಕಾಂಗ್ರೆಸ್ನ ಈ ನೀಚ ಕೃತ್ಯಕ್ಕೆ ಹಿಂದೂ ಸಮಾಜ ಸರಿಯಾದ ಪಾಠ ಕಲಿಸುತ್ತದೆ ಎಂದರು.
ಓದಿ: ಉದ್ಯಮಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡ ಸಂಗೀತ ಮಾಂತ್ರಿಕ ಎ ಆರ್ ರೆಹಮಾನ್ ಪುತ್ರಿ
ದೇವಾಲಯಗಳ ಸ್ವಾಯತ್ತತೆ ಇಡೀ ರಾಜ್ಯದ ಸಮಸ್ತ ಹಿಂದೂಗಳ ಭಾವನೆಯಾಗಿತ್ತು. ಕ್ರಿಶ್ಚಿಯನ್ ಹಾಗೂ ಮುಸ್ಲಿಂ ಧಾರ್ಮಿಕ ಕ್ಷೇತ್ರಗಳಲ್ಲಿ ಅದರದ್ದೇ ಆದ ಧಾರ್ಮಿಕ ಸಂಸ್ಥೆಗಳ ಮೂಲಕ ಅದರ ಆಡಳಿತ ನಡೆಯುತ್ತದೆ. ಆದರೆ, ಹಿಂದೂ ದೇವಾಲಯಗಳಿಗೆ ಮಾತ್ರ ಸರ್ಕಾರ ಹಸ್ತಕ್ಷೇಪ ಮಾಡುತ್ತಿರುತ್ತದೆ.
ಆದ್ದರಿಂದ ಈ ನೂತನ ಯೋಜನೆಯನ್ನು ಸ್ವಾಗತಿಸುತ್ತೇನೆ. ಹಿಂದೂ ಸಮಾಜವೂ ಸೇರಿದಂತೆ ಎಲ್ಲ ದೇವಸ್ಥಾನಗಳು, ಮಠಾಧಿಪತಿಗಳು ಇದನ್ನು ಸ್ವಾಗತಿಸಿದ್ದಾರೆ ಎಂದರು.
ಮತಾಂತರ ನಿಷೇಧ ಕಾನೂನು :
ಮತಾಂತರ ನಿಷೇಧ ಕಾನೂನನ್ನು ಯಾವುದೇ ಒಂದು ಮತಧರ್ಮಗಳನ್ನು ವಿರೋಧಿಸುವಂತೆ ಮಾಡಿದ್ದಲ್ಲ. ಕೇವಲ ಹಿಂದೂಗಳ ಮತಾಂತರ ಮಾತ್ರವಲ್ಲ, ಎಲ್ಲ ಸಮುದಾಯಗಳಲ್ಲೂ ಮತಾಂತರ ಕೃತ್ಯ ನಡೆಯುತ್ತಿದೆ. ಈ ಕುರಿತಾದ ನಿರ್ಧಾರ ಕೈಗೊಳ್ಳಲು ನಮ್ಮ ಸರ್ಕಾರ ಬದ್ಧವಿದೆ. ಸರ್ಕಾರದ ಎರಡೂ ನಿರ್ಧಾರಗಳನ್ನು ಅಭಿನಂದಿಸಿ ಸ್ವಾಗತಿಸುತ್ತೇನೆ ಎಂದರು.
ಸಿದ್ದರಾಮಯ್ಯ ಈ ಬಗ್ಗೆ ಭಾರಿ ಟೀಕೆಗಳನ್ನು ಮಾಡುತ್ತಿದ್ದಾರೆ. ಆದರೆ, ಅವರು ಯಾರನ್ನು ಮೆಚ್ಚಿಸಲು ಟಿಪ್ಪು ಜಯಂತಿ ಮಾಡಿದರೆಂದು ಮೊದಲು ಯೋಚನೆ ಮಾಡಲಿ. ಟಿಪ್ಪು ಜಯಂತಿ ಮೂಲಕ ಸಮಾಜವನ್ನು ಒಡೆದು ಆಳಿದವರು ನೀವು.
ಶಾದಿ ಭಾಗ್ಯದಲ್ಲೂ ಅಲ್ಪಸಂಖ್ಯಾತರನ್ನು ಹುಡುಕಿದ್ದೀರಿ. ಯೋಜನೆಗಳಲ್ಲಿ ಮತೀಯ ಭಾವನೆಗಳನ್ನು ಹುಡುಕಿದ್ದೀರಿ. ಇದೀಗ ಇದನ್ನು ವಿರೋಧಿಸುವ ನೀವು, ಹಿಂದೂ ವಿರೋಧಿ ನೀತಿಯನ್ನು ಅನುಸರಿಸುತ್ತಿದ್ದೀರಿ ಎಂದು ಹೇಳಿದರು.
ಓದಿ: ಲಾಕ್ಡೌನ್ ಜಾರಿಯಾದರೂ ನಾವು ನಮ್ಮ ಪಾದಯಾತ್ರೆ ನಿಲ್ಲಿಸುವುದಿಲ್ಲ: ಸರ್ಕಾರಕ್ಕೆ ಡಿಕೆಶಿ ಸವಾಲು
ಈಗ ಅಹಿಂದ ಹೇಳುತ್ತಿರುವ ನೀವು, ನಿಮ್ಮ ಕಾಲದಲ್ಲಿ ಹಿಂದುಳಿದ ವರ್ಗಗಳ ಪ್ರಶಾಂತ್ ಪೂಜಾರಿ, ಶರತ್ ಮಡಿವಾಳ, ಪುಟ್ಟಪ್ಪ ಸತ್ತಾಗ ಏನು ಮಾಡಿದ್ದೀರಿ. ಹೀಗೆ ಹಿಂದೂ ಸಮಾಜವನ್ನು ಒಡೆದು ಆಳಿ ಅಹಿಂದವನ್ನು ಸೃಷ್ಟಿ ಮಾಡಿ ಮತ ಬ್ಯಾಂಕ್ಗೋಸ್ಕರ ಆಸೆ ಪಡುತ್ತಿದ್ದೀರಿ.
ಈ ಕಾರಣಕ್ಕೋಸ್ಕರ ಹಿಂದೂ ನಿರ್ಣಯದ ವಿರೋಧಿಯಾಗಿ, ಹಿಂದೂ ವಿರೋಧಿ ನೀತಿಯಲ್ಲಿ ಕಾಂಗ್ರೆಸ್ ಇದೆ. ಆದ್ದರಿಂದ ಕಾಂಗ್ರೆಸ್ನ ಈ ನಿರ್ಧಾರವನ್ನು ತಿರಸ್ಕರಿಸಲಾಗುತ್ತದೆ ಎಂದರು.
ಒಮಿಕ್ರಾನ್ ನಿಯಂತ್ರಣಕ್ಕೆ ಮುನ್ನೆಚ್ಚರಿಕೆ ವಹಿಸಲಾಗಿದೆ:
ಒಮಿಕ್ರಾನ್ ಬಗ್ಗೆ ಸರ್ಕಾರ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ಇದಕ್ಕಾಗಿ ಸೇವಾ ಹಿ ಸಂಘಟನೆಯ ಮುಖಾಂತರ ವಾರ್ಡ್ಗಳಲ್ಲಿ ಕಾರ್ಯಕರ್ತರನ್ನು ಇಳಿಸಿ ಮಾಡುತ್ತಿದೆ. ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡುತ್ತಿದೆ. ತಜ್ಞರ ತಂಡ ನೀಡುವ ಗೈಡ್ ಲೈನ್ಸ್ ಮುಖಾಂತರ ಕೋವಿಡ್ ಅನ್ನು ನಿಯಂತ್ರಣ ಮಾಡುವ ಕೆಲಸ ಆಗುತ್ತಿದೆ.
ಜನರೇ ಈ ಬಗ್ಗೆ ಎಚ್ಚೆತ್ತು, ಇದನ್ನೆಲ್ಲಾ ನಿಯಂತ್ರಣ ಮಾಡಿದರೆ ಸಮಸ್ಯೆಯಿಲ್ಲ. ಆದ್ದರಿಂದ ಪೂರಕವಾಗಿ ಸರ್ಕಾರ ಮುನ್ನೆಚ್ಚರಿಕೆ ವಹಿಸಿದೆ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದರು.