ಕುಕ್ಕೆಸುಬ್ರಹ್ಮಣ್ಯ : ನಾಗರ ಪಂಚಮಿ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯದಲ್ಲಿ ವಿಶೇಷ ಪೂಜೆ ಮಾಡಲಾಯಿತು. ಕೋವಿಡ್ ಹಿನ್ನೆಲೆ ಭಕ್ತರಿಗೆ ಅವಕಾಶವಿರಲಿಲ್ಲ. ದೇವಸ್ಥಾನದ ಸಿಬ್ಬಂದಿ ಹಾಗೂ ಅರ್ಚಕರು ನಾಗರಪಂಚಮಿಯ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಉಳಿದ ದೇವಸ್ಥಾನಗಳಲ್ಲಿ ಕೋವಿಡ್ ನಿಯಮ ಪಾಲಿಸಿ ಭಕ್ತರಿಗೆ ಹಬ್ಬ ಆಚರಣೆಗೆ ಅವಕಾಶ ನೀಡಲಾಗಿತ್ತು.
ಕರಾವಳಿಗರ ಮೊದಲ ಹಬ್ಬ : ಕರಾವಳಿ ಜಿಲ್ಲೆಯ ಜನರ ಮೊದಲ ಹಬ್ಬ ನಾಗರಪಂಚಮಿಯನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಜಿಲ್ಲೆಯ ಎಲ್ಲಾ ದೇವಸ್ಥಾನಗಳಲ್ಲೂ ಕೋವಿಡ್ ನಿಯಮಗಳನ್ನು ಪಾಲಿಸಿ ಹಬ್ಬವನ್ನು ಭಕ್ತಿಯಿಂದ ಆಚರಿಸಿದ್ದಾರೆ.
ಮುಂಜಾನೆಯಿಂದಲೇ ದೇವಸ್ಥಾನಕ್ಕೆ ಭೇಟಿ ನೀಡಿದ ಭಕ್ತರು ನಾಗರ ವಿಗ್ರಹಕ್ಕೆ ಹಾಲು ಹಾಗೂ ಸೀಯಾಳವನ್ನು ಸಮರ್ಪಿಸುವ ಮೂಲಕ ತಮ್ಮ ಮೊದಲ ಹಬ್ಬವನ್ನು ಭಕ್ತಿಯಿಂದ ಆಚರಿಸಿದ್ದಾರೆ. ಪುತ್ತೂರಿನ ಇತಿಹಾಸ ಪ್ರಸಿದ್ಧ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಾಗರ ಪಂಚಮಿಯನ್ನು ಸಂಪ್ರದಾಯದಂತೆ ಆಚರಿಸಲಾಗಿದೆ. ಕೊರೊನಾ ಹಿನ್ನೆಲೆ ಈ ಬಾರಿ ಕ್ಷೇತ್ರದಲ್ಲಿ ಭಕ್ತರ ಸಂಖ್ಯೆಯಲ್ಲಿ ತೀರಾ ಇಳಿಮುಖವಾಗಿದೆ.
ಮಂಗಳೂರಿನ ಕುಡುಪು ಕ್ಷೇತ್ರದಲ್ಲಿ ನೂರಾರು ಭಕ್ತರು ತನು ಸಮರ್ಪಿಸಿದರು. ಮಂಗಳೂರಿನ ಪ್ರಸಿದ್ಧ ನಾಗದೇವರ ಕ್ಷೇತ್ರ ಎಂದೇ ಕರೆಯಲ್ಪಡುವ ಕುಡುಪು ಅನಂತಪದ್ಮನಾಭ ಕ್ಷೇತ್ರದಲ್ಲಿ ಇಂದು ಮುಂಜಾನೆಯಿಂದಲೇ ನೂರಾರು ಭಕ್ತರು ಬಂದು ಸೀಯಾಳ ಹಾಗೂ ಹಾಲನ್ನು ಕ್ಷೇತ್ರಕ್ಕೆ ತಂದು ನಾಗದೇವರಿಗೆ ಸಮರ್ಪಿಸಿದರು.