ಮಂಗಳೂರು: ಮಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಕೇಂದ್ರ ಸರ್ಕಾರ ಸ್ವಾಮ್ಯದ ಎಂಆರ್‌ಪಿಎಲ್ ಸಂಸ್ಥೆಯು ಮಾರ್ಚ್ 31ಕ್ಕೆ ಕೊನೆಗೊಂಡ ಆರ್ಥಿಕ ವರ್ಷದಲ್ಲಿ ದಾಖಲೆಯ 2,955 ಕೋಟಿ ರೂ. ಲಾಭ ಗಳಿಸಿದೆ. ಕಳೆದ ಸಾಲಿನಲ್ಲಿ ಸಂಸ್ಥೆ 761 ಕೋಟಿ ರೂ. ನಷ್ಟ ಅನುಭವಿಸಿತ್ತು. ಸಂಸ್ಥೆ ನಿರ್ವಹಣೆ ಮೂಲಕ 86,064 ಕೋಟಿ ರೂ. ಆದಾಯ ಗಳಿಸಿದ್ದು, ಹಿಂದಿನ ವರ್ಷದಲ್ಲಿ ಇದು 50,796 ಕೋಟಿ ರೂ. ಆಗಿತ್ತು.
ಜನವರಿಯಿಂದ ಮಾರ್ಚ್ವರೆಗಿನ ನಾಲ್ಕನೇ ತ್ರೈಮಾಸಿಕ ಅವಧಿಯಲ್ಲಿ ಸಂಸ್ಥೆ 3008 ಕೋಟಿ ರೂ . ಲಾಭ ಗಳಿಸಿದೆ. ಬ್ರೆಜಿಲ್‌ನಿಂದ ಟುಪಿ ಕ್ರೂಡ್, ಅಮ್ಮಾ ಕೂಡ್, ಲಿಬಿಯಾದಿಂದ ನೈಜಿರಿಯಾದಿಂದ ಎಜಿನಾ ಕ್ರೂಡ್ ಮತ್ತು ಬಬಾಬ್ ಕ್ರೂಡ್ನಂತಹ ವಿವಿಧ ಕಚ್ಚಾ ತೈಲಗಳನ್ನು ಸಂಸ್ಕರಿಸಲಾಗಿದೆ. 2022 ರ ಮಾರ್ಚ್‌ನಲ್ಲಿ ಅತಿ ಹೆಚ್ಚು ಮೋಟರ್ ಸ್ಟ್ರೀಟ್ ಉತ್ಪಾದನೆ ಹಾಗೂ ಅತಿ ಹೆಚ್ಚಿನ ಪ್ರಮಾಣದ ಸ್ಪೀಡ್ ಡೀಸೆಲ್ ವಿತರಿಸಿದ ಸಾಧನೆಯನ್ನು ಸಂಸ್ಥೆ ಮಾಡಿದೆ.
2021 ರಲ್ಲಿ ಸಂಸ್ಥೆಯು ಉಪ್ಪು ನೀರು ಶುದ್ದೀಕರಣ ಸ್ಥಾವರವನ್ನು ಸ್ಥಾಪಿಸಿದ್ದು, ಇದು ನೀರಿನ ಲಭ್ಯತೆಗೆ ಸಂಬಂಧಿಸಿದಂತೆ ಕಂಪನಿಯು ಎದುರಿಸುತ್ತಿರುವ ಕೊರತೆಯನ್ನು ಸಾಕಷ್ಟು ಮಟ್ಟಿಗೆ ತಗ್ಗಿಸಿದೆ. ಸಂಸ್ಥೆಯು ಎರಡು ರಾಜ್ಯ ಮಟ್ಟದ ಸುರಕ್ಷತಾ ಪ್ರಶಸ್ತಿ ಮತ್ತು ತೈಲ ಮತ್ತು ಅನಿಲ ಉದ್ಯಮದಲ್ಲಿ ಉತ್ತಮ ಸುರಕ್ಷತಾ ಕ್ರಮಗಳಿಗಾಗಿ ಪ್ರಶಸ್ತಿಯನ್ನು ಪಡೆದುಕೊಂಡಿದೆ.