ಬಂಟ್ವಾಳ: ಫ್ಯಾನ್ಸಿ ನಂಬರ್ಗಳ ನೋಟುಗಳ ಸಂಗ್ರಹದ ಮೂಲಕ ಗಮನ ಸೆಳೆದಿರುವ ಮಹಮ್ಮದ್ ಯಾಸೀರ್ ಕಲ್ಲಡ್ಕ ಅವರು ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬಕ್ಕೆ ವಿಶೇಷ ನಂಬರ್ಗಳಿರುವ ನೋಟುಗಳ ಸಂಗ್ರಹ ಮಾಡುವ ಮೂಲಕ ಮತ್ತೊಮ್ಮೆ ಗಮನ ಸೆಳೆದಿದ್ದಾರೆ.
ಪ್ರಧಾನಿ ಮೇಲಿನ ಗೌರವ - ಅಭಿಮಾನದಿಂದ ನಾನು ಈ ವಿಶೇಷ ನಂಬರ್ಗಳುಳ್ಳ ನೋಟುಗಳ ಸಂಗ್ರಹ ನಡೆಸಿದ್ದೇನೆ. ಇಲ್ಲಿ ರಾಜಕೀಯದ ಯಾವುದೇ ಹಿತಾಸಕ್ತಿ ಇಲ್ಲ. ನೋಟಿನ ಸಂಗ್ರಹ ಮುಂದಿನ ತಲೆಮಾರಿಗೂ ಜ್ಞಾನವನ್ನು ನೀಡಬೇಕೆನ್ನುವುದು ನನ್ನ ಪ್ರತೀ ಸಂಗ್ರಹದ ಉದ್ದೇಶ ಎನ್ನುತ್ತಾರೆ ಯಾಸೀರ್.
17/09/1950 ರಂದು ಪ್ರಧಾನಿ ನರೇಂದ್ರ ಮೋದಿಯವರು ಜನಿಸಿದ್ದು, ಈ ಸಂಖ್ಯೆಯ ನೋಟಿನ ಜೊತೆಗೆ "ಕಲೆಕ್ಷನ್ ಆಫ್ 100 ಬರ್ತ್ ಡೇಟ್ ನೋಟ್ಸ್" ಎನ್ನುವ ಡೈರಿಯನ್ನು ಯಾಸೀರ್ ಸಿದ್ಧಪಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಬಳಿಕ ಚಲಾವಣೆಗೆ ಬಂದಿರುವ ಇಪ್ಪತ್ತು ರೂಪಾಯಿಯ ಹೊಸ ನೋಟಿನಲ್ಲೇ ಪ್ರಧಾನಿ ಮೋದಿಯವರ ಜನ್ಮದಿನಾಂಕದ ಸಂಖ್ಯೆಯನ್ನು ಹುಡುಕಿ ಸಂಗ್ರಹಿಸಿರುವ ಯಾಸೀರ್, 100 ಹುಟ್ಟುಹಬ್ಬದ ಪರಿಕಲ್ಪನೆಯನ್ನು ಡೈರಿಯಲ್ಲಿ ನೀಡಿದ್ದಾರೆ.
ಇದನ್ನೂ ಓದಿ: ಮಹಿಳೆಯರ ರಕ್ಷಣೆಗೆ ಮುಂದಾದ ಧಾರವಾಡ ಯುವಕರ ತಂಡ: ಆಟೋ ರಕ್ಷಾ ಫೌಂಡೇಶನ್ ವಿಶೇಷ ಸೇವೆ
ಪ್ರತಿ ಪುಟದಲ್ಲಿ 5 ನೋಟಿನಂತೆ 20 ಪುಟಗಳ ಈ ಡೈರಿಯಲ್ಲಿ ಮೋದಿ ಜೀವನದ ಪ್ರಮುಖ ಘಟ್ಟಗಳನ್ನು ಆಯಾ ವರ್ಷಕ್ಕೆ ಸಂಬಂಧಿಸಿದ ಪುಟಗಳಲ್ಲಿ ದಾಖಲಿಸಲಾಗಿದೆ.