ಮಂಗಳೂರು: ಕನ್ನಡದ ಖ್ಯಾತ ನಟಿ, ಬಿಜೆಪಿ ಮುಖಂಡೆ ತಾರಾ ಅನುರಾಧ್ ಇಂದು ನಗರದ ಸ್ಟೇಟ್ ಬ್ಯಾಂಕ್ ಪಕ್ಕದಲ್ಲಿರುವ ಮೀನು ಮಾರುಕಟ್ಟೆಯಲ್ಲಿ ಚುನಾವಣಾ ಪ್ರಚಾರ ನಡೆಸಿದರು.
ಈ ಸಂದರ್ಭ ಅವರು ಮೀನುಗಾರ ಮಹಿಳೆಯರ ಅಹವಾಲುಗಳನ್ನು ಆಲಿಸಿ ಅವರೊಂದಿಗೆ ಸಂವಾದ ನಡೆಸಿದರು.ನಂತರ ಸುದ್ದಿಗಾರರೊಂದಿಗೆ ನಟಿ ತಾರಾ ಮಾತನಾಡಿ, ನಾನು ಮೀನುಗಾರ ಮಹಿಳೆಯರೊಂದಿಗೆ ಮಾತನಾಡಿದ್ದು, ಇಲ್ಲಿನ ಮೀನು ಮಾರಾಟ ಮಾಡುವ ಮಹಿಳೆಯರನ್ನು ಇಲ್ಲಿಂದ ಸ್ಥಳಾಂತರ ಮಾಡಲಾಗುತ್ತಿದೆ. ಅದು ಬೇಡ, ನಮಗೆ ಇಲ್ಲಿಯೇ ಸುಸಜ್ಜಿತ ಮಾರುಕಟ್ಟೆ ನಿರ್ಮಾಣ ಮಾಡಿ ಎಂಬ ಬೇಡಿಕೆ ಮುಂಡಿಟ್ಟಿದ್ದಾರೆ. ಹಿಂದೆಕೃಷಿ ಇಲಾಖೆಯೊಂದಿಗಿದ್ದ ಮೀನುಗಾರಿಕೆಗೆ ಮೋದಿ ಸರ್ಕಾರ ಬೇರೆಯೇ ಇಲಾಖೆ ಮಾಡಿದೆ. ಅಲ್ಲಿ ಪ್ರತ್ಯೇಕ ಮಂತ್ರಿಯನ್ನೂ ನೇಮಕ ಮಾಡಿದೆ. ಇದು ಮೀನುಗಾರರಿಗೆ ಸಿಕ್ಕಿದ ದೊಡ್ಡ ಗೆಲುವು. ಇದರಿಂದ ಇಡೀ ದೇಶದ ಸಮಗ್ರ ಮೀನುಗಾರರ ಸಮಸ್ಯೆಗಳ ನಿವಾರಣೆ ಸಾಧ್ಯ ಎಂದು ತಿಳಿಸಿದರು.
ನಾನು ಚುನಾವಣಾ ಪ್ರಚಾರದ ದೃಷ್ಟಿಯಿಂದ ರಾಜ್ಯಾದ್ಯಂತ ಸಂಚರಿಸುತ್ತಿದ್ದೇನೆ. ಎಲ್ಲಡೆ ಒಂದು ರೀತಿ ಅರಿವು ಮೂಡಿದ್ದು, ಎಲ್ಲರಲ್ಲೂ ಮೋದಿಯ ಹೆಸರು ಕೇಳಿ ಬರುತ್ತಿದೆ. ನಮ್ಮ ಉದ್ದೇಶ ಕರ್ನಾಟಕದ ಎಲ್ಲಾ 28 ಕ್ಷೇತ್ರಗಳಲ್ಲಿ ಬಿಜೆಪಿಗೆ ಜಯ ಲಭಿಸಬೇಕು. ಮತ್ತೊಮ್ಮೆ ಮೋದಿಯವರೇ ಪ್ರಧಾನಿಯಾಗಬೇಕು ಎಂದು ನಟಿ ತಾರಾ ಹೇಳಿದರು.
ನಾನು ಇಲ್ಲಿಗೆ ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತಳಾಗಿ ಬಂದಿದ್ದೇನೆ. ಈ ಮಾರುಕಟ್ಟೆಯು ಸ್ಥಳಾಂತರಗೊಳ್ಳುತ್ತೆ, ಶುಚಿ ಇಲ್ಲ ಎಂಬ ಅನೇಕ ಸಮಸ್ಯೆಗಳಿವೆ. ಇದನ್ನು ಇಲ್ಲಿನ ರಾಜ್ಯ ಸರ್ಕಾರ ನಿವಾರಣೆ ಮಾಡಬೇಕಿತ್ತು. ಆದ್ರೆ ಸರ್ಕಾರದಿಂದ ಆ ಕೆಲಸ ಆಗಿಲ್ಲ. ಹೀಗಾಗಿ ರಾಜ್ಯದಲ್ಲೂ ಬದಲಾವಣೆ ಬೇಕು. ಇದರಿಂದ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ ಎಂದು ಅಭಿಪ್ರಾಯಪಟ್ರು.
ಸಿನಿಮಾ ಕಲಾವಿದರು ರಾಜಕೀಯ ರಂಗಕ್ಕೆ ಬರುವ ಬಗ್ಗೆ ಸಿಎಂ ಕುಮಾರಸ್ವಾಮಿ ಟೀಕಿಸಿರುವ ಕುರಿತು ಮಾತನಾಡಿದ ಅವರು, ಸ್ವತಃ ಕುಮಾರಸ್ವಾಮಿಯವರೂ ಕೂಡಾ ನಿರ್ಮಾಪಕರಾಗಿ ಸಿನಿಮಾ ನಂಟು ಹೊಂದಿರುವವರು. ಅವರ ಸುಪುತ್ರ ಸಿನಿಮಾ ಕಲಾವಿದರು. ಈ ಸಿನಿಮಾ ಕಲಾವಿದರೆಂದರೆ ಸಮಾಜದಿಂದ ಹೊರಗಿರುವ ವರ್ಗ ಅಲ್ಲ. ಅವರೂ ಕೂಡ ಸಮಾಜದ ಒಂದು ವರ್ಗ. ಸಿನಿಮಾ ರಂಗವನ್ನು ಯಾಕೆ ಜರಿಯುತ್ತಿದ್ದಾರೆ ಎಂಬುದನ್ನು ನೀವು ಅವರನ್ನೇ ಕೇಳಬೇಕು ಎಂದರು.
ಇನ್ನು ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಕುರಿತು ಪ್ರತಿಕ್ರಿಯಿಸಿ ತಾರಾ, ನಳೀನ್ ಕುಮಾರ್ ರಾಜ್ಯದ ನಂ 1 ಲೋಕಸಭಾ ಸದಸ್ಯರು. ರಾಷ್ಟ್ರದಲ್ಲಿ 26 ನೇ ಸ್ಥಾನ ಪಡೆದವರು. ಅವರ ಕಾರ್ಯ ಸಾಧನೆಗಳನ್ನು ಕರಪತ್ರಗಳಲ್ಲಿ ಮುದ್ರಿಸಿದ್ದೇವೆ. ಅವರಿಗಿಂತ ಒಳ್ಳೆಯ ಅಭ್ಯರ್ಥಿ ಬೇರೆಯಾರೂ ಸಿಗಲು ಸಾಧ್ಯವಿಲ್ಲ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಂಗಳೂರು ದಕ್ಷಿಣದ ಶಾಸಕ ವೇದವ್ಯಾಸ ಕಾಮತ್, ಸುಲೋಚನಾ ಭಟ್, ಪೂರ್ಣಿಮಾ ಭಟ್ ಮತ್ತು ಮಹಿಳಾ ಬಿಜೆಪಿ ಕಾರ್ಯಕರ್ತರ ಜೊತೆಗಿದ್ದರು.