ಉಳ್ಳಾಲ(ದಕ್ಷಿಣ ಕನ್ನಡ): ಮುನ್ನೂರು ಭಾಗದ 25 ವರ್ಷದ ಕೊರೊನಾ ಸೋಂಕಿತ 20 ನಿಮಿಷಗಳ ಕಾಲ ಆಂಬ್ಯುಲೆನ್ಸ್ನಲ್ಲೇ ಉಳಿದಿದ್ದು, ಶಾಸಕ ಯು.ಟಿ.ಖಾದರ್ ಮಧ್ಯಪ್ರವೇಶದ ಬಳಿಕ ಆಸ್ಪತ್ರೆ ವೈದ್ಯರು ಯೆನೆಪೋಯ ಹಸನ್ ಛೇಂಬರ್ಸ್ ಕಟ್ಟಡದಲ್ಲಿರುವ ಕೋವಿಡ್ ಚಿಕಿತ್ಸಾ ಕೇಂದ್ರಕ್ಕೆ ದಾಖಲಿಸಿದ್ದಾರೆ.
ಬಂಟ್ವಾಳದ ಸಜಿಪದಲ್ಲಿ ನೆರೆ ಹಾವಳಿ ಪ್ರದೇಶವನ್ನ ವೀಕ್ಷಿಸಲು ಶಾಸಕ ಯು.ಟಿ.ಖಾದರ್ ತೆರಳುತ್ತಿದ್ದರು. ದಾರಿ ಮಧ್ಯೆ ಯೆನೆಪೋಯ ಆಸ್ಪತ್ರೆ ಎದುರುಗಡೆ ಖಾಸಗಿ ಕಟ್ಟಡದ ಬಳಿ ಪಿಪಿಇ ಕಿಟ್ ಧರಿಸಿದ್ದ ಮಂದಿ ಆಂಬ್ಯುಲೆನ್ಸ್ ಜೊತೆಗೆ ನಿಂತಿದ್ದರು. ಇದನ್ನ ಗಮನಿಸಿದ ಖಾದರ್ ಕಾರು ನಿಲ್ಲಿಸಿ, ಆಂಬ್ಯುಲೆನ್ಸ್ ಸಿಬ್ಬಂದಿ ಜೊತೆಗೆ ಮಾತನಾಡಿದಾಗ ಸೋಂಕಿತ ಆಂಬ್ಯುಲೆನ್ಸ್ ಒಳಗಿರುವುದು ಗೊತ್ತಾಗಿದೆ.
ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿಯಿಂದ ಸಂದೇಶ ಬಾರದ ಹಿನ್ನೆಲೆ ಸೋಂಕಿತನನ್ನ ಒಳ ಸೇರಿಸಲು ಕೋವಿಡ್ ಚಿಕಿತ್ಸಾ ಕೇಂದ್ರದ ವೈದ್ಯರು ನಿರಾಕರಿಸಿದ್ದರಂತೆ. ತಕ್ಷಣ ಸ್ಪಂದಿಸಿದ ಶಾಸಕ ಯು.ಟಿ.ಖಾದರ್, ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳನ್ನ ಸಂಪರ್ಕಿಸಿ ತಕ್ಷಣ ಸೋಂಕಿತನನ್ನು ದಾಖಲಿಸುವಂತೆ ಒತ್ತಾಯಿಸಿದ್ದಾರೆ. ಶಾಸಕರ ಮಾತಿಗೆ ಸ್ಪಂದಿಸಿದ ಅಧಿಕಾರಿಗಳು, ಸೋಂಕಿತನನ್ನ ತಕ್ಷಣ ಕೋವಿಡ್ ಚಿಕಿತ್ಸಾ ಕೇಂದ್ರಕ್ಕೆ ದಾಖಲಿಸಿದರು. ಶಾಸಕರ ಮಾನವೀಯ ಕಾರ್ಯಕ್ಕೆ ಆಂಬ್ಯುಲೆನ್ಸ್ ಸಿಬ್ಬಂದಿ ಕೃತಜ್ಞತೆ ಸಲ್ಲಿಸಿದ್ದಾರೆ.