ವಿಜಯಪುರ: ವಿಜಯಪುರ ನಗರದಲ್ಲಿನ ಎಲ್ಲಾ ರಸ್ತೆಗಳಿಗೂ ಸ್ವಾತಂತ್ರ್ಯ ಹೋರಾಟಗಾರರ, ಪೂಜ್ಯರ ಹೆಸರಿಟ್ಟದ್ದೇನೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ತಿಳಿಸಿದ್ದಾರೆ. ಮುಸ್ಲಿಂ ರಾಜರ ಹೆಸರು ಬದಲಾವಣೆ ಹಾಗೂ ರಸ್ತೆಗಳಿಗೆ ಹಿಂದೂ ಗಣ್ಯರ, ಹೋರಾಟಗಾರರ ಹೆಸರಿಡೋ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಯತ್ನಾಳ್, ನಗರದಲ್ಲಿ ಹಲವಾರು ರಸ್ತೆಗಳಿಗೆ ಹೆಸರಿರಲಿಲ್ಲ. ಸದ್ಯ ರಸ್ತೆಗಳಿಗೆ ಹೆಸರಿಡಲಾಗಿದೆ ಎಂದರು.
ಮನಗೂಳಿ ರಸ್ತೆ, ಬೊಂಬಾಲ ಅಗಸಿ, ಮುಳ್ಳಗಸಿ, ಇಂಡಿ ರೋಡ್, ಅಥಣಿ ರೋಡ್, ದರ್ಗಾ ರಸ್ತೆಗಳಿಗೆ ಮೊದಲು ಹೆಸರಿರಲಿಲ್ಲ. ಎಸ್ಎಸ್ ಫ್ರಂಟ್ ರೋಡ್ ಇದ್ದುದನ್ನು ಬದಲಾಯಿಸಿ ಅದಕ್ಕೆ ರಾಜಮಾತಾ ಅಹಲ್ಯಾಬಾಯಿ ಹೋಳ್ಕರ್ ಎಂದು ಮರು ನಾಮಕರಣ ಮಾಡಿದ್ದೇವೆ. ಅಂಬೇಡ್ಕರ್ ಪಥದ ಬಳಿಯ ರಸ್ತೆಗೆ ಕನಕದಾಸ ಮಾರ್ಗ ಎಂದು ಹೆಸರಿಡಲಾಗಿದೆ. ಸ್ಟೇಷನ್ ರಸ್ತೆಗೆ ಬಾಬಾಸಾಹೇಬ್ ಅಂಬೇಡ್ಕರ್ ಎಂದು ಮಾಡಲಾಗಿದೆ. ಗೋದಾವರಿ ಹೋಟೆಲ್ ಬಳಿಯ ರಸ್ತೆಗೆ ಡಾ ಬಾಬು ಜಗಜೀವನ್ ರಾಮ್ ಎಂದು ಹೆಸರಿಟ್ಟಿದ್ದೇವೆ. ತೊರವಿ ರಸ್ತೆಗೆ ಸುಭಾಷ್ ಚಂದ್ರ ಬೋಸ್, ಬಬಲೇಶ್ವರ ನಾಕಾ ರಸ್ತೆಗೆ ಸರ್ದಾರ್ ವಲ್ಲಭಬಾಯ್ ಪಟೇಲ್ ಎಂದು ಹೆಸರು ಇಟ್ಟಿದ್ದಾಗಿ ತಿಳಿಸಿದರು.
ಬಸ್ ನಿಲ್ದಾಣದ ಪಕ್ಕದ ರಸ್ತೆಗೆ ಡಾ. ಎಪಿಜೆ ಅಬ್ದುಲ್ ಕಲಾಂ, ಆಕಾಶವಾಣಿ ಕೇಂದ್ರ ಬಳಿಯ ರಸ್ತೆಗೆ ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್, ಬಾಗಲಕೋಟೆ ರಸ್ತೆಗೆ ಸರ್ ಎಂ ವಿಶ್ವೇಶ್ವರಯ್ಯ, ಮನಗೂಳಿ ರಸ್ತೆಗೆ ಮಹಾರಾಣಾ ಪ್ರತಾಪ್, ದರ್ಗಾ ಬಳಿಯ ಮತ್ತೊಂದು ರಸ್ತೆಗೆ ಚಂದ್ರಶೇಖರ್ ಆಜಾದ್ ಮಾರ್ಗ, ಎಸ್ಪಿ ಕಚೇರಿ ಎದುರಿನ ಸೊಲ್ಲಾಪುರ ರಸ್ತೆಗೆ ಸಂಗೊಳ್ಳಿ ರಾಯಣ್ಣ ಮಾರ್ಗ ಎಂದು ಹೆಸರಿಡಲಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ: ನಮ್ಮ ದೂರಿಗೆ ರಾಜ್ಯಪಾಲರು ಸ್ಪಂದಿಸಿದ್ದಾರೆ; ಈಶ್ವರಪ್ಪ ವಿರುದ್ಧ ಕ್ರಮದ ವಿಶ್ವಾಸ ಮೂಡಿದೆ ಎಂದ ಡಿಕೆಶಿ
ಇದರಲ್ಲಿ ನನ್ನ ಹೆಸರು, ನನ್ನ ತಂದೆಯ ಹೆಸರು ಇಟ್ಟಿದ್ದೇವಾ ಎಂದು ಪ್ರಶ್ನೆ ಮಾಡಿದರು. ಜೊತೆಗೆ ಇವರೇನು(ಮೇಲಿನ ಹೆಸರುಗಳು) ದೇಶದ್ರೋಹಿಗಳಾ ಎಂದು ಪ್ರಶ್ನೆ ಮಾಡಿದರು. ರಸ್ತೆಗೆ ನಾಮಕರಣ ವಿಚಾರದಲ್ಲಿ ಆರೋಪ ಮಾಡುತ್ತಿರುವವರಿಗೆ ತಮ್ಮ ಸ್ಪಷ್ಟನೆ ಮೂಲಕ ತಿರುಗೇಟು ನೀಡಿದರು.