ಮಂಗಳೂರು : ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಯ್ಯ ಯಾರಿಗೂ ಬೇಡವಾಗಿರುವ ಕೂಸಾಗಿದ್ದಾರೆ. ಅವರು ತಾಳ್ಮೆ ಕಳೆದುಕೊಂಡು ಮಾತನಾಡುತ್ತಿದ್ದಾರೆ. 'ಬಿಜೆಪಿಯನ್ನು ಕಿತ್ತೆಸೆಯೋಕೆ ಅದೇನು ಕೊತ್ತಂಬರಿ ಸೊಪ್ಪೇ'? ಎಂದು ಸಚಿವ ಬಿ. ಶ್ರೀರಾಮುಲು ಪ್ರಶ್ನಿಸಿದ್ದಾರೆ. ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ಪಕ್ಷ ಇಡೀ ದೇಶದಲ್ಲಿ, ರಾಜ್ಯದಲ್ಲಿ ಆಲದ ಮರವಾಗಿ ಬೆಳೆದು ನಿಂತಿದೆ. ಬಿಜೆಪಿ ಕಾರ್ಮಿಕ ವರ್ಗಕ್ಕೆ ಶಕ್ತಿಯನ್ನು ತುಂಬಿದ್ದು, ಪ್ರಧಾನಿ ಮೋದಿ ದೇಶಕ್ಕೆ ಸಮರ್ಥ ನಾಯಕರಾಗಿದ್ದಾರೆ ಎಂದರು.
ದೇಶದಲ್ಲಿ ಕಾಂಗ್ರೆಸ್ ಯಾರಿಗೂ ಬೇಡವಾದ ಪಕ್ಷವಾಗಿದೆ. 50 ವರ್ಷವನ್ನು ಆಳಿದ ಕಾಂಗ್ರೆಸ್ ಪಕ್ಷವನ್ನು ದೇಶ ತಿರಸ್ಕಾರ ಮಾಡಿದೆ. 2023ರಲ್ಲಿ ಜನತೆ ಆಲದ ಮರಕ್ಕೆ ನೀರೆರೆಯುವ ಮೂಲಕ ಮತ್ತಷ್ಟು ಎತ್ತರಕ್ಕೆ ಬೆಳೆಸುತ್ತಾರೆ. ರಾಜ್ಯದಲ್ಲಿ ಭಾವನಾತ್ಮಕ ಸಂಬಂಧ ಬೆಳೆಯುತ್ತಿದೆ. ಬೆಳವಣೆಗೆಗಳ ಬಗ್ಗೆ ಮುಖ್ಯಮಂತ್ರಿಗಳು ಸ್ಪಷ್ಟ ಉತ್ತರ ನೀಡಿದ್ದಾರೆ.
ಎಲ್ಲಾ ಧರ್ಮೀಯರಿಗೂ ಗೌರವ ಕೊಡುವ ಕೆಲಸ ಮಾಡಿದ್ದಾರೆ. ಕಾನೂನನ್ನು ಕಾಪಾಡುವ ಕೆಲಸ ಎಲ್ಲರೂ ಮಾಡಬೇಕು. ಸಿಎಂ ಬೊಮ್ಮಾಯಿ ಸಮರ್ಥ ನಾಯಕರಾಗಿದ್ದು, ರಾಜ್ಯ ಬಜೆಟ್ನಲ್ಲಿ ಸಿಎಂ ಏನು ಎಂಬುವುದನ್ನು ನಿರೂಪಿಸಿದ್ದಾರೆ ಎಂದರು. ಕೊರೊನಾ ಸಮಯದಲ್ಲಿಯೂ ಒಳ್ಳೆಯ ಬಜೆಟ್ ನೀಡಿದ್ದಾರೆ.
ಬೊಮ್ಮಾಯಿ ಚಾಣಾಕ್ಯನ ರೀತಿಯಲ್ಲಿ ರಾಜಕೀಯ ಮಾಡುತ್ತಾರೆ. ಪ್ರತಿಪಕ್ಷಗಳಿಗೆ ಇದನ್ನೆಲ್ಲಾ ತಡೆಯಲು ಆಗುತ್ತಿಲ್ಲ. ಹೀಗಾಗಿ, ಈ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ಜನ ಮರೆಯುತ್ತಿದ್ದಾರೆ. ಹೀಗಾಗಿ, ಕಾಂಗ್ರೆಸ್ ನಾಯಕರು ಈ ಹೇಳಿಕೆಯನ್ನು ನೀಡುತ್ತಿದ್ದಾರೆ ಎಂದು ಬಿ.ಶ್ರೀರಾಮುಲು ಹೇಳಿದರು.
ಇದನ್ನೂ ಓದಿ: 'ದೇಶ ಉಳಿಸಲು ಕಾಂಗ್ರೆಸ್ ಪಕ್ಷವನ್ನು ಕಿತ್ತೊಗೆಯಬೇಕು' ಎಂದ ಸಿದ್ದರಾಮಯ್ಯ!