ಮಂಗಳೂರು: ದಕ್ಷಿಣ ಕನ್ನಡ - ಉಡುಪಿ ಜಿಲ್ಲೆಯ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯ ಸ್ವತಂತ್ರ ಅಭ್ಯರ್ಥಿ ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರು ಮಾಡಿರುವ ದಂಧೆ, ಲೂಟಿ, ಭ್ರಷ್ಟಾಚಾರಕ್ಕೆ 25 ಸಾವಿರ ರೂ. ಆಮಿಷ ಅಲ್ಲ, 2.50 ಲಕ್ಷ ರೂ. ಕೊಡಲು ಸಾಧ್ಯ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಜನಸ್ವರಾಜ್ ಸಮಾವೇಶ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈಗಾಗಲೇ ಬಿಜೆಪಿ ಮತದಾರರಿಗೆ ಒಂದು ಮತಕ್ಕೆ 25 ಸಾವಿರ ರೂ. ಲಂಚ ಕೊಡುವ ಆಮಿಷಗಳು ಬರುತ್ತಿವೆ. ಆದರೆ ಅವರು ಮಾಡಿರುವ ದಂಧೆಗೆ, ಲೂಟಿಗೆ, ಭ್ರಷ್ಟಾಚಾರಕ್ಕೆ 25 ಸಾವಿರ ರೂ. ಅಲ್ಲ, 2.50 ಲಕ್ಷ ರೂ. ಕೊಡವುದು ಸಾಧ್ಯ ಎಂದು ವಿಧಾನ ಪರಿಷತ್ ಪಕ್ಷೇತರ ಅಭ್ಯರ್ಥಿ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಹೆಸರು ಹೇಳದೆ ಶೋಭಾ ಕರಂದ್ಲಾಜೆ ಟಾಂಗ್ ನೀಡಿದರು.
ಆದರೆ ನಮ್ಮ ಬಿಜೆಪಿ ಕಾರ್ಯಕರ್ತರು ಯಾರಿಗೂ ಕೊಂಡುಕೊಳ್ಳಲು ಸಿಕ್ಕುವವರಲ್ಲ. ಇದು ಅವರಿಗೆ ಗೊತ್ತಿರಬೇಕು. ಕೋಟ ಶ್ರೀನಿವಾಸ ಪೂಜಾರಿಯವರಲ್ಲಿ ಹಣವಿರಲಿಕ್ಕಿಲ್ಲ. ಆದರೆ ಅವರು ಪಕ್ಷದ ನಿಷ್ಠಾವಂತ ಕಾರ್ಯಕರ್ತ. ನಮ್ಮ ಮತದಾರರೂ ಪಕ್ಷಕ್ಕಾಗಿ ಪ್ರಾಣಕೊಡುವ ಕಾರ್ಯಕರ್ತರು. ಆದ್ದರಿಂದ ಯಾರೂ ನಮ್ಮನ್ನು ಕೊಂಡುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು.
ವಿಧಾನ ಪರಿಷತ್ ಚುನಾವಣೆಗೆ ದ.ಕ.ಜಿಲ್ಲೆಯಲ್ಲಿ 3,292 ಮತದಾರರಿದ್ದಾರೆ. ಅದರಲ್ಲಿ ಬಿಜೆಪಿ ಸದಸ್ಯರು 2,142 ಮಂದಿ ಇದ್ದಾರೆ. ಇಷ್ಟೊಂದು ಮತದಾರರು ನಮ್ಮವರೇ ಎಂದ ಮೇಲೆ ವಿಧಾನ ಪರಿಷತ್ ಚುನಾವಣಾ ಕಣದ ದ.ಕ.ಜಿಲ್ಲೆಯ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿಯವರು ಇವತ್ತೇ ಗೆದ್ದಿದ್ದಾರೆಂದು ಘೋಷಿಸಬಹುದೆಂದು ಅಂದುಕೊಳ್ಳುತ್ತೇನೆ. ಆದ್ದರಿಂದ ಮತದಾರರು ತಮ್ಮ ಮತದೊಂದಿಗೆ ಇನ್ನೂ ನಾಲ್ಕು ಮತದಾರರನ್ನು ಇತ್ತಕಡೆಗೆ ತರಬೇಕು ಎಂದು ಶೋಭಾ ಕರಂದ್ಲಾಜೆ ಕರೆ ನೀಡಿದರು.
'ಸಹಕಾರಿ ಬ್ಯಾಂಕ್‌ನಲ್ಲಿ ಅಕ್ರಮ ಎಸಗುವವರನ್ನು ಮಟ್ಟಹಾಕಲು ತಿಳಿದಿದೆ'
ಮಂಗಳೂರು ಡಿಸಿಸಿ ಬ್ಯಾಂಕ್‌ಅನ್ನು ನವೋದಯ ಟ್ರಸ್ಟ್ ಎಂದು ಮಾಡಿರೋದನ್ನು ನಾನು ಆಕ್ಷೇಪಣೆ ವ್ಯಕ್ತಪಡಿಸುವುದಿಲ್ಲ. ಆದರೆ ನವೋದಯ ಗ್ರಾಮೀಣ ಟ್ರಸ್ಟ್ ಗೆ ಡಿಸಿಸಿ ಬ್ಯಾಂಕ್‌ನಲ್ಲಿ ಅವಕಾಶ ಕೊಡುವುದು ಹಾಗೂ ಪ್ರತಿ ತಿಂಗಳು ಈ ಟ್ರಸ್ಟ್‌ಗೆ 19 ಲಕ್ಷ ರೂ. ಡಿಸಿಸಿ ಬ್ಯಾಂಕ್‌ನಿಂದ ವರ್ಗಾವಣೆ ಮಾಡುವುದು ಕಾನೂನು ಬಾಹಿರ ಎಂದು ರಾಜ್ಯ ಸಹಕಾರಿ ಮಂತ್ರಿ ಎಸ್.ಟಿ.ಸೋಮಶೇಖರ್ ಹೇಳಿದರು.