ಪುತ್ತೂರು: ದಕ್ಷಿಣಕನ್ನಡ ಜಿಲ್ಲೆಯ ಸಂಪಾಜೆ, ಸುಳ್ಯ ಹಾಗೂ ಕೊಡಗು ಭಾಗದಲ್ಲಿ ಕಳೆದೆರಡು ವಾರಗಳಿಂದ ಭೂಮಿ ಕಂಪಿಸಿದ ಅನುಭವವಾಗುತ್ತಿದೆ. ಈ ಕುರಿತು ಅಧ್ಯಯನ ನಡೆಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿರುವುದಾಗಿ ಸುಳ್ಯ ಶಾಸಕ ಹಾಗೂ ಸಚಿವ ಎಸ್.ಅಂಗಾರ ತಿಳಿಸಿದರು.
ನಾಲ್ಕು ವರ್ಷದ ಹಿಂದೆ ಕೊಡಗು ಜಿಲ್ಲೆಯ ಜೋಡುಪಾಲದಲ್ಲಿ ನಡೆದ ದುರಂತದ ಬಳಿಕ ಈ ಭಾಗದ ಜನರಲ್ಲಿ ಪ್ರಕೃತಿ ವಿಕೋಪದ ಭಯ ನಿರಂತರವಾಗಿ ಕಾಡುತ್ತಿದೆ. ಜಿಲ್ಲೆಯ ಸುಳ್ಯ, ಸಂಪಾಜೆ, ಕಲ್ಲುಗುಂಡಿ, ಚೆಂಬು ಮೊದಲಾದ ಪ್ರದೇಶಗಳಲ್ಲಿ ಕಳೆದ ಎರಡು ವಾರದಿಂದ ಲಘು ಭೂಕಂಪನವಾಗಿದೆ. ಈ ಎರಡು ವಾರದಲ್ಲಿ ನಾಲ್ಕು ಬಾರಿ ಭೂಮಿ ಕಂಪಿಸಿದ ಅನುಭವವಾಗಿದ್ದು, ರಿಕ್ಟರ್ ಮಾಪಕದಲ್ಲಿ 2.5 ಹಾಗು 3.0 ತೀವ್ರತೆ ದಾಖಲಾಗಿದೆ.
ಈ ನಡುವೆ ಭೂಕಂಪನ ಸಂಭವಿಸಿದ ಸುಳ್ಯದ ಪ್ರದೇಶಗಳಿಗೆ ಭೇಟಿ ನೀಡಿದ ಸಚಿವ ಎಸ್. ಅಂಗಾರ, ಈ ರೀತಿಯ ಭೂಕಂಪನಕ್ಕೆ ಕಾರಣವೇನು? ಎನ್ನುವ ಕುರಿತು ಸೂಕ್ತ ಅಧ್ಯಯನ ನಡೆಸಬೇಕೆಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿರುವುದಾಗಿ ಹೇಳಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಈ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರಕ್ಕೆ ಪತ್ರ ಬರೆದಿದ್ದು, ಕೇಂದ್ರ ಪ್ರಾಕೃತಿಕ ವಿಕೋಪ ತಂಡ ಈ ಭಾಗಗಳಿಗೆ ಭೇಟಿ ನೀಡಿ, ಅಧ್ಯಯನ ನಡೆಸಬೇಕೆಂದು ಒತ್ತಾಯಿಸಿದರು.
ಈ ಭಾಗದಲ್ಲಿ ಭೂಮಿ ಕಂಪಿಸುತ್ತಿರುವುದಕ್ಕೆ ಪ್ರಕೃತಿಯಲ್ಲಾದ ಬದಲಾವಣೆ ಹಾಗು ಹೆಚ್ಚುತ್ತಿರುವ ಕೊಳವೆ ಬಾವಿಗಳು ಕಾರಣ ಎನ್ನುವುದು ತಜ್ಞರ ವಾದ. ಇತ್ತೀಚಿನ ದಿನಗಳಲ್ಲಿ ಗುಡ್ಡಗಳನ್ನು ಕೊರೆಯುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಮಣ್ಣು ಸಾಗಾಟ ಮತ್ತು ವಾಣಿಜ್ಯ ಉದ್ದೇಶಗಳಿಗಾಗಿ ಮಿತಿಗಿಂತಲೂ ಹೆಚ್ಚಾಗಿ ಗುಡ್ಡವನ್ನು ಕಡಿಯಲಾಗುತ್ತಿದ್ದು, ಇವುಗಳ ನಿಯಂತ್ರಣಕ್ಕೆ ಜಿಲ್ಲಾಡಳಿತ ಮುಂದಾಗಬೇಕಿದೆ. ಜೊತೆಗೆ ಸುಳ್ಯ ಭಾಗದ ಕೇವಲ ಒಂದು ಗ್ರಾಮದಲ್ಲಿ 50 ಕ್ಕೂ ಹೆಚ್ಚು ಕೊಳವೆ ಬಾವಿಗಳನ್ನು ಕೊರೆಯಲಾಗಿದ್ದು, ಇದು ಕೂಡ ಭೂ ಅಸಮತೋಲನಕ್ಕೆ ಕಾರಣವಾಗುತ್ತಿದೆ ಎಂಬ ವಿಚಾರವನ್ನು ಈಗಾಗಲೇ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿರುವ ಸಚಿವ ಎಸ್.ಅಂಗಾರ, ಈ ನಿಟ್ಟಿನಲ್ಲಿ ಸರ್ಕಾರ ಕೂಡ ನಿಯಮಗಳನ್ನ ರೂಪಿಸುವ ಅಗತ್ಯವಿದೆ ಎಂದಿದ್ದಾರೆ.
ಇದನ್ನೂ ಓದಿ: ರಾಷ್ಟ್ರಪತಿ ಚುನಾವಣೆ: ಕರ್ನಾಟಕ ಶಾಸಕನ ಮತ ಮೌಲ್ಯ 131; ಲೆಕ್ಕಾಚಾರ ಹೀಗಿದೆ..