ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತಾಲಿಬಾನ್ ಸಂಸ್ಕೃತಿ ನಡೆಸಲು ಬಿಡುವುದಿಲ್ಲ ಎಂದು ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ದ.ಕ ಜಿಲ್ಲೆಯ ಪುತ್ತೂರು ತಾಲೂಕಿನ ಕಬಕ ಗ್ರಾ.ಪಂ ವ್ಯಾಪ್ತಿಯಲ್ಲಿ ನಡೆದ 75ನೇ ಸ್ವಾತಂತ್ರ್ಯೋತ್ಸವದ ರಥಕ್ಕೆ ಎಸ್ಡಿಪಿಐ ಕಾರ್ಯಕರ್ತರು ದಾಂಧಲೆ ನಡೆಸಿ ಅಡ್ಡಿಪಡಿಸಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ಈ ವಿಚಾರವನ್ನು ಬಿಜೆಪಿ ರಾಜ್ಯಾಧ್ಯಕ್ಷರು, ರಾಜ್ಯ ಗೃಹ ಮಂತ್ರಿಗಳ ಗಮನಕ್ಕೆ ತರಲಾಗಿದೆ. ಕೂಡಲೇ ಕೃತ್ಯ ಎಸಗಿದವರನ್ನು ಬಂಧಿಸುವಂತೆ ಒತ್ತಡ ಹೇರಿದ್ದೇನೆ ಎಂದು ಹೇಳಿದರು.
ದಕ್ಷಿಣ ಕನ್ನಡ ಶಾಂತಿಯುತ ಜಿಲ್ಲೆ. ಕಿಡಿಗೇಡಿಗಳು ಸ್ವಾತಂತ್ರ್ಯೋತ್ಸವದ ರಥಕ್ಕೆ ಅಡ್ಡಿಪಡಿಸಿದ್ದಾರೆ. ವೀರ ಸಾವರ್ಕರ್ ಫೋಟೋ ತೆಗೆಯಲು ಒತ್ತಡ ಹಾಕಿ ಇತರ ನಾಯಕರ ಫೋಟೋ ಹಾಕುವಂತೆ ಒತ್ತಡ ಹೇರಿದ್ದಾರೆ. ಕೂಡಲೇ ಇವರ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದೇನೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಇದನ್ನೂ ಓದಿ: ಪುತ್ತೂರು: ಸಾವರ್ಕರ್ ಫೋಟೋ ತೆಗೆದು ಟಿಪ್ಪು ಫೋಟೋ ಹಾಕುವಂತೆ SDPI ಕಾರ್ಯಕರ್ತರ ಪಟ್ಟು