ಸುಬ್ರಹ್ಮಣ್ಯ/ದ.ಕನ್ನಡ: ದಿ. ನಟ ಪುನೀತ್ ರಾಜ್ಕುಮಾರ್ ಅಭಿಮಾನಿಗಳು ಆತ್ಮಹತ್ಯೆ ಮಾಡಿಕೊಂಡರೆ ಪುನೀತ್ ಅವರ ಆತ್ಮಕ್ಕೆ ಶಾಂತಿ ಸಿಗಲ್ಲ. ಅವರು ಸ್ಥಾಪಿಸಿರುವ ಸಂಸ್ಥೆಗಳಿವೆ, ಆ ಮೂಲಕ ನಾವು ಸಾಮಾಜಕ್ಕೆ ಸೇವೆ ಸಲ್ಲಿಸಿದರೆ ಅವರ ಆತ್ಮಕ್ಕೆ ಶಾಂತಿ ಸಿಗುತ್ತದೆ. ಇದು ಅವರಿಗೆ ಸಲ್ಲಿಸುವ ದೊಡ್ಡ ಶ್ರದ್ಧಾಂಜಲಿ ಆಗಲಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇಗುಲಕ್ಕೆ ಸೋಮವಾರ ರಾತ್ರಿ ಭೇಟಿ ನೀಡಿದ ಗೃಹ ಸಚಿವರು ಪತ್ರಕರ್ತರೊಂದಿಗೆ ಮಾತನಾಡಿದರು. ರಾಜ್ಯದಲ್ಲಿ ಪೊಲೀಸ್ ಇಲಾಖೆ ಬಲವರ್ಧನೆಗೆ ಸರ್ಕಾರವು ಹೆಚ್ಚಿನ ಮಹತ್ವ ನೀಡುತ್ತಿದೆ. ರಾಜ್ಯದಲ್ಲಿ ಸುಮಾರು 100 ಠಾಣೆಗಳ ಹೊಸ ಕಟ್ಟಡಗಳ ಕಾಮಗಾರಿಗಳನ್ನು 200 ಕೋಟಿ ರೂಪಾಯಿ ವೆಚ್ಚದಲ್ಲಿ ನಡೆಸಲಾಗುವುದು. ಕುಕ್ಕೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಗೂ 1 ಕೋಟಿ ರೂ. ಅನುದಾನ ಇಡಲಾಗಿದೆ. ಸದ್ಯದಲ್ಲೇ ಠಾಣೆಯ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.
ರಾಜ್ಯದಲ್ಲಿ ಪೊಲೀಸರಿಗೆ ವಸತಿ ಯೋಜನೆಯಡಿ 2025ರ ಒಳಗಾಗಿ ಸುಮಾರು 10,000 ಮನೆಗಳು ನಿರ್ಮಾಣವಾಗಲಿವೆ. ಪೊಲೀಸ್ ಇಲಾಖೆಯಲ್ಲಿ ವಾರ್ಷಿಕ 4,000 ನೇಮಕಾತಿ ನಡೆಸಲಾಗುತ್ತಿದೆ. ಈಗ 12,000 ಹುದ್ದೆಗಳು ಖಾಲಿ ಇವೆ ಎಂದು ತಿಳಿಸಿದರು.
ಇನ್ನೂ ಉಪ್ಪಿನಂಗಡಿಯಲ್ಲಿ ಭಾರತೀಯ ಸೇನೆಯ ನಿವೃತ್ತ ಯೋಧನ ಮನೆಗೆ ತೆರಳುವ ದಾರಿಯಲ್ಲಿ ಪತ್ತೆಯಾದ ಗ್ರೆನೇಡ್ ಪ್ರಕರಣಕ್ಕೆ ಪ್ರತಿಕ್ರಿಯಿಸಿ, ಈಗಾಗಲೇ ಸರಿಯಾದ ರೀತಿಯಲ್ಲಿ ತನಿಖೆ ನಡೆಯುತ್ತಿದೆ ಎಂದು ಹೇಳಿದರು.
ಇದನ್ನೂ ಓದಿ: ತನ್ನೊಂದಿಗೆ ಮದುವೆಯಾಗಬೇಕಿದ್ದ ಯುವತಿಗೆ ಅಶ್ಲೀಲ ಸಂದೇಶ ಕಳುಹಿಸಿದ ಮಂಗಳೂರಿನ ಭೂಪ.. ಅವನೊಬ್ಬ ಸಲಿಂಗಕಾಮಿ!?
ಕುಕ್ಕೆ ಸುಬ್ರಹ್ಮಣ್ಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಸಚಿವರು ನಂತರ ನರಸಿಂಹ ಸ್ವಾಮಿ ಮಠಕ್ಕೆ ಭೇಟಿ ನೀಡಿ ಶ್ರೀ ವಿದ್ಯಾಪ್ರಸನ್ನ ಸ್ವಾಮೀಜಿಗಳ ಆಶೀರ್ವಾದ ಪಡೆದರು.
ಇಂದು ಧರ್ಮಸ್ಥಳದಲ್ಲಿ ಪೊಲೀಸ್ ಠಾಣೆಯ ಶಿಲಾನ್ಯಾಸವನ್ನು ಗೃಹ ಸಚಿವರು ನೆರವೇರಿಸಲಿದ್ದಾರೆ. ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರ ಉಪಸ್ಥಿತಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅಧ್ಯಕ್ಷತೆ ವಹಿಸಲಿದ್ದಾರೆ. ಸಚಿವರುಗಳಾದ ಎಸ್. ಅಂಗಾರ, ಕೋಟಾ ಶ್ರೀನಿವಾಸ ಪೂಜಾರಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.