ಮಂಗಳೂರು: ಭಾರತೀಯ ಸೇನೆ ಸೇರಬೇಕು ಎಂಬ ಕನಸು ಹೊತ್ತ ಮಂಗಳೂರಿನ ಯುವತಿ ಮನಿಷಾ ಏರ್‌ಫೋರ್ಸ್ ಫ್ಲೈಯಿಂಗ್ ಬ್ರಾಂಚ್ಗೆ ಆಯ್ಕೆಯಾಗುವ ಮೂಲಕ ಗುರಿ ಸಾಧಿಸಿದ ಖುಷಿಯಲ್ಲಿದ್ದಾರೆ. ಏರ್‌ಫೋರ್ಸ್ ಫ್ಲೈಯಿಂಗ್ ಬ್ರಾಂಚ್ಗೆ ಆಯ್ಕೆಯಾದ ರಾಜ್ಯದ ಏಕೈಕ ಯುವತಿ ಈಕೆ ಎನ್ನುವುದು ವಿಶೇಷ. ಇವರು ಇಲ್ಲಿನ ಅಶೋಕನಗರ ನಿವಾಸಿ, ಭಾರತೀಯ ಸ್ಟೇಟ್ ಬ್ಯಾಂಕ್ ನಿವೃತ್ತ ಅಧಿಕಾರಿ ಮನೋಹರ ಶೆಟ್ಟಿ ಮತ್ತು ಸರ್ಕಾರಿ ಶಾಲೆಯ ಮುಖ್ಯಶಿಕ್ಷಕಿ ಮಾಲತಿ ಶೆಟ್ಟಿ ದಂಪತಿಯ ಪುತ್ರಿ.
ಮನಿಷಾ ನಿನ್ನೆಯಷ್ಟೆ ತರಬೇತಿಗೆಂದು ಹೈದರಾಬಾದ್‌ಗೆ ತೆರಳಿದ್ದಾರೆ. ಬಿಜೈ ಲೂರ್ಡ್ ಸೆಂಟ್ರಲ್ ಸ್ಕೂಲ್ ಮತ್ತು ಸೇಂಟ್ ಅಲೋಶಿಯಸ್ ಶಾಲೆಯಲ್ಲಿ ಪ್ರಾಥಮಿಕ, ಪ್ರೌಢ ಮತ್ತು ಪಿಯುಸಿ ವಿದ್ಯಾಭ್ಯಾಸ ಪೂರೈಸಿ, ಬೆಂಗಳೂರಿನ ರಾಮಯ್ಯ ಕಾಲೇಜಿನಲ್ಲಿ ಬಿಇ ಪದವಿ ಪಡೆದಿದ್ದಾರೆ. ಶಿಕ್ಷಣದ ಬಳಿಕ ಮರ್ಸಿಡಿಸ್ ಕಂಪೆನಿಯಲ್ಲಿ ಈಕೆ ಉದ್ಯೋಗದಲ್ಲಿದ್ದರು.
ಏರ್‌ಫೋರ್ಸ್ ಆಯ್ಕೆ 6 ತಿಂಗಳ ಪ್ರಕ್ರಿಯೆ. ಪ್ರಾರಂಭದಲ್ಲಿ ದೇಶದ 5 ಕೇಂದ್ರಗಳಲ್ಲಿ ನಡೆಯುವ ಕಾಮನ್ ಎಂಟ್ರೆನ್ಸ್ ಎಕ್ಸಾಂನಲ್ಲಿ ನಿಯಮಿತ ಅಂಕ ಗಳಿಸಬೇಕು. ಇದರಲ್ಲಿ ವಾಯುಪಡೆಗೆ 250 ವಿದ್ಯಾರ್ಥಿನಿಯರು ಪರೀಕ್ಷೆ ಬರೆದಿದ್ದು, 59 ಮಂದಿ ಎರಡನೇ ಹಂತ ಪ್ರವೇಶಿಸಿದ್ದರು. ಈ ಪೈಕಿ ಮತ್ತೊಂದು ಹಂತಕ್ಕೆ 15 ಮಂದಿಯನ್ನು ಆಯ್ಕೆ ಮಾಡಲಾಗಿತ್ತು. ಇದಾದ ಬಳಿಕ ಕಠಿಣ ದೈಹಿಕ ಕ್ಷಮತಾ ಪರೀಕ್ಷೆ (ಮೆಡಿಕಲ್ ಟೆಸ್ಟ್) ನಡೆಯುತ್ತದೆ. ಇವರಲ್ಲಿ ಐವರನ್ನು ಆಯ್ಕೆ ಮಾಡಲಾಗಿದೆ. ಈ ಐದು ಮಂದಿಯಲ್ಲಿ ಮನಿಷಾ ಸೇರಿದಂತೆ ಮೂವರು ಆಯ್ಕೆಯಾಗಿದ್ದಾರೆ. ಆಯ್ಕೆಯಾದ ಉಳಿದಿಬ್ಬರು ದಿಲ್ಲಿಯವರು.
ಮನಿಷಾರ ತಂದೆ ಮನೋಹರ್ ಶೆಟ್ಟಿ ಈ ಹಿಂದೆ ವಾಯುಪಡೆಗೆ ಆಯ್ಕೆಯಾಗಿದ್ದು, ಇವರ ಅಣ್ಣ ಕೂಡ ಏರ್‌ಫೋರ್ಸ್‌ನಲ್ಲಿದ್ದಾರೆ. ತನ್ನಿಬ್ಬರು ಮಕ್ಕಳಲ್ಲಿ ಒಬ್ಬರನ್ನು ಪೈಲಟ್ ಮಾಡಬೇಕೆಂಬ ಕನಸು ಅವರದ್ದಾಗಿತ್ತು. ಇದಕ್ಕಾಗಿ ಬಾಲ್ಯದಿಂದಲೇ ಮಕ್ಕಳ ಚಲನವಲನ, ಆಸಕ್ತಿಯನ್ನು ಸೂಕ್ಷ್ಮವಾಗಿ ಗಮನಿಸಿ ಮನಿಷಾರನ್ನು ಸೇನೆಗೆ ಸೇರುವಂತೆ ಪ್ರೋತ್ಸಾಹಿಸಿದ್ದಾರೆ.
ಭೂಸೇನೆ, ನೌಕಾ ದಳಕ್ಕೂ ಆಯ್ಕೆಯಾಗಿದ್ದ ಮನಿಷಾ ಅದರಿಂದ ಹಿಂದೆ ಸರಿದು ಪೈಲಟ್ ಆಗುವ ಇಚ್ಛೆಯಿಂದ ಏರ್‌ಪೋರ್ಸ್‌ಗೆ ಪ್ರಯತ್ನ ಮತ್ತೆ ಮುಂದುವರಿಸಿದ್ದರು. ಕೊನೆಗೂ ತಂದೆಯ ಇಚ್ಛೆಯಂತೆ ಗುರಿ ಸಾಧಿಸಿದ್ದಾರೆ. ಏರ್‌ಪೋರ್ಸ್‌ಗೆ ಆಯ್ಕೆಯಾಗಬೇಕಾದರೆ ಕಠಿಣ ತರಬೇತಿ ಅಗತ್ಯ. ಆದರೆ ಮನಿಷಾ ಯಾವುದೇ ತರಬೇತಿ ಪಡೆಯದೆ ತಂದೆಯ ಮಾರ್ಗದರ್ಶನವನ್ನಷ್ಟೇ ಪಡೆದು ಯೂಟ್ಯೂಬ್ನಿಂದಲೇ ಮಾಹಿತಿ ಸಂಗ್ರಹಿಸಿ, ಸ್ವಂತ ಪರಿಶ್ರಮದಿಂದ ಗುರಿ ಸಾಧಿಸಿದ್ದಾರೆ.
ಇದನ್ನೂ ಓದಿ: ದಾಖಲೆ ಅವಧಿಯಲ್ಲಿ ಸೇತುವೆ ಮರುನಿರ್ಮಿಸಿದ ಸೇನೆ, ಅಮರನಾಥ ಯಾತ್ರಿಕರ ನಿಟ್ಟುಸಿರು