ಮಂಗಳೂರು: ಮಂಗಳೂರಿನಲ್ಲಿ ವಾಹನದಲ್ಲಿ ಸಾಗಿಸುತ್ತಿದ್ದ 1.92 ಕೋಟಿ ರೂಪಾಯಿ ಅಮಾನ್ಯ ನೋಟುಗಳನ್ನು ಪೊಲೀಸರು ವಶಪಡಿಸಿಕೊಂಡು ಮೂವರನ್ನು ಬಂಧಿಸಿದ್ದಾರೆ. ಮಂಗಳೂರಿನ ಕಣ್ಣೂರಿನ ಜುಬೈರ್ ಹಮ್ಮಬ್ಬ(52), ಪಡೀಲ್ನ ದೀಪಕ್(32), ಬಜ್ಪೆಯ ಅಬ್ದುಲ್ ನಾಸೀರ್ (40) ಬಂಧಿತರು.
ಹಣ ಸಾಗಿಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ತಿಳಿದ ಪೊಲೀಸರು ಮಂಗಳೂರಿನ ಲಾಲ್ಬಾಗ್ ಕಡೆಯಿಂದ ನೆಹರು ಅವೆನ್ಯೂ ರಸ್ತೆಯಲ್ಲಿ ಸಾಗುತ್ತಿದ್ದ ಕಾರನ್ನು ಕೆನರಾ ಸ್ಕೂಲ್ ಬಳಿ ತಡೆದು ಪರಿಶೀಲಿಸಿದಾಗ ಅಮಾನ್ಯಗೊಂಡ 500 ಮತ್ತು 1000 ರೂಪಾಯಿ ಮುಖಬೆಲೆಯ 1,92,50,000 ಮೌಲ್ಯದ ನೋಟುಗಳು ಪತ್ತೆಯಾಗಿವೆ. ನೋಟು ಸಾಗಿಸಲು ಬಳಸಿದ ಇನ್ನೋವಾ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪೊಲೀಸ್ ಕಮೀಷನರ್ ಪ್ರಕರಣದ ಬಗ್ಗೆ ಹೇಳಿದ್ದಿಷ್ಟು
ಇನ್ನು ಈ ಕುರಿತು ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಂಗಳೂರು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್, ಆರೋಪಿಗಳು ಶಿವಮೊಗ್ಗ, ಚಿತ್ರದುರ್ಗದಿಂದ ಹಳೆ ನೋಟುಗಳನ್ನು ತಂದು ಮಂಗಳೂರಿನ ವ್ಯಕ್ತಿಗಳಿಗೆ ಮಾರಾಟಕ್ಕೆ ಯತ್ನಿಸಿದ್ದರು. ಅಮಾನ್ಯಗೊಂಡ ನೋಟುಗಳನ್ನು ಬ್ಯಾಂಕ್ಗೆ ನೀಡಿದರೆ ಶೇ.50ರಷ್ಟು ಚಾಲ್ತಿಯಲ್ಲಿರುವ ಹಣವನ್ನು ನೀಡುತ್ತಾರೆ ಎಂದು ನಂಬಿಸಿದ್ದರು.
ನಮ್ಮಲ್ಲಿ ಭಾರೀ ಪ್ರಮಾಣದಲ್ಲಿ ಹಳೆ ನೋಟು ಇದ್ದು, ಬ್ಯಾಂಕ್ಗಿಂತಲೂ ಕಡಿಮೆ ಅಂದರೆ, ಶೇಕಡಾ 20 ರಷ್ಟು ಹಣ ನೀಡಿದರೆ ನೀಡಿದರೆ ಈ ಅಮಾನ್ಯಗೊಂಡ ಹಣ ನೀಡಲಾಗುವುದು ಎಂದು ವ್ಯವಹಾರ ಕುದುರಿಸಿದ್ದರು. ಹಣವನ್ನು ಸಾಗಣೆ ಮಾಡುತ್ತಿದ್ದ ವೇಳೆ ಬರ್ಕೆ ಠಾಣೆ ಪೊಲೀಸರು ಆರೋಪಿಗಳನ್ನು ಬಂಧಿಸಿ ಅಮಾನ್ಯ ನೋಟು ಮತ್ತು ಕಾರನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.
ಹಳೆ ನೋಟುಗಳಿಗೆ ಈಗ ಯಾವುದೇ ಬೆಲೆಯಿಲ್ಲ. ಬ್ಯಾಂಕ್ನಲ್ಲಿ ಕೊಟ್ಟರೆ ಹಣ ಸಿಗುತ್ತದೆ. ಐಟಿ ದಾಖಲೆ ತೋರಿಸಿದರೆ ಹಣ ಸಿಗುತ್ತದೆ ಎಂಬ ಪೊಳ್ಳು ಭರವಸೆಗಳನ್ನು ನಂಬಬೇಡಿ. ಅಮಾನ್ಯ ಹಣ ಕೊಡುವುದು ಮತ್ತು ತೆಗೆದುಕೊಳ್ಳುವುದು ಅಪರಾಧವಾಗಿದೆ. ಇಂತಹ ಪ್ರಕರಣಗಳಲ್ಲಿ 10 ಸಾವಿರ ಅಥವಾ ವಶಪಡಿಸಿಕೊಂಡ ಹಣದ 5 ಪಟ್ಟು ಹಣದಲ್ಲಿ ಯಾವುದು ಹೆಚ್ಚೋ ಅದನ್ನು ದಂಡವಾಗಿ ವಸೂಲಿ ಮಾಡಲಾಗುತ್ತದೆ ಎಂದು ಪೊಲೀಸ್ ಕಮಿಷನರ್ ತಿಳಿಸಿದರು.