ಮಂಗಳೂರು: ನಿನ್ನೆ (ಮಂಗಳವಾರ) ಮಂಗಳೂರಿನಲ್ಲಿ ನಡೆದ ತಂದೆಯಿಂದಲೇ ಮಗನಿಗೆ ಗುಂಡೇಟು ಪ್ರಕರಣದಲ್ಲಿ ಗಂಭೀರವಾಗಿ ಗಾಯಗೊಂಡಿರುವ ಬಾಲಕನ ಮಿದುಳು ನಿಷ್ಕ್ರಿಯವಾಗಿದೆ.
ಮಂಗಳೂರಿನ ಮೋರ್ಗನ್ ಗೇಟ್ ಬಳಿ ಇರುವ ವೈಷ್ಣವಿ ಕಾರ್ಗೋ ಪ್ರೈ ಲಿಮಿಟೆಡ್ ಮುಂಭಾಗದಲ್ಲಿ ನಿನ್ನೆ ನಡೆದ ಗೊಂದಲದ ವೇಳೆ, ತಂದೆ ಮಾಡಿದ ಫೈರಿಂಗ್ನಲ್ಲಿ ಮಗನ ತಲೆಗೆ ಗುಂಡು ತಗುಲಿತ್ತು. ಈ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವೈಷ್ಣವಿ ಕಾರ್ಗೋ ಸಂಸ್ಥೆಯ ಮಾಲೀಕ ರಾಜೇಶ್ ಪ್ರಭು ಅವರ ಪತ್ನಿ ಬಳಿ ವೇತನ ಕೇಳಿಕೊಂಡು ಇಬ್ಬರು ಚಾಲಕರು ಗಲಾಟೆ ಶುರು ಮಾಡಿದ್ದರು.
ಈ ಸಂದರ್ಭ ಕಚೇರಿಯ ಹಿಂಭಾಗದಲ್ಲಿರುವ ಮನೆಯಲ್ಲಿದ್ದ ಮಗನಿಗೆ ಕರೆ ಮಾಡಿದ ರಾಜೇಶ್ ಪ್ರಭು, ಪತ್ನಿ ತಂದೆಯೊಂದಿಗೆ ಬರಲು ತಿಳಿಸಿದ್ದರು. ಅದರಂತೆ ರಾಜೇಶ್ ಪ್ರಭು ತನ್ನ ಮಗ ಸುಧೀಂದ್ರನ ಜತೆ ಬಂದಿದ್ದು, ಈ ವೇಳೆ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.
ಈ ವೇಳೆ, ಸುಧೀಂದ್ರನು ಹಲ್ಲೆ ಮಾಡಿದ್ದು, ಅಲ್ಲಿ ಹೊಡೆದಾಟ ಆರಂಭವಾಗಿತ್ತು. ಈ ಸಂದರ್ಭ ರಾಜೇಶ್ ಪ್ರಭು ತನ್ನ ಕಿಸೆಯಲ್ಲಿದ್ದ ಪಿಸ್ತೂಲ್ ನಿಂದ ಎರಡು ಸುತ್ತು ಫೈರಿಂಗ್ ಮಾಡಿದ್ದಾರೆ. ಆಗ ಅವರ ಮಗನ ಎಡಗಣ್ಣಿನ ಹುಬ್ಬಿನ ಬಳಿ ಗುಂಡು ತಗುಲಿ ಗಂಭೀರ ಗಾಯವಾಗಿತ್ತು.
ಗಂಭೀರವಾಗಿ ಗಾಯಗೊಂಡ ಸುಧೀಂದ್ರ ಅವರನ್ನು ಮಂಗಳೂರಿನ ಯುನಿಟಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಆದರೆ, ಅವರ ಮಿದುಳು ನಿಷ್ಕ್ರಿಯವಾಗಿದೆ.
ತಂದೆಗೆ ಹೃದಯಾಘಾತ:
ನಿನ್ನೆ ಗೊಂದಲಕ್ಕೆ ಕಾರಣವಾಗಿ ತನ್ನ ಮಗನ ಮೇಲೆಯೇ ಗುಂಡು ಹಾರಿಸಿದ ಉದ್ಯಮಿ ರಾಜೇಶ್ ಪ್ರಭು ಅವರಿಗೆ ಹೃದಯಾಘಾತ ಸಂಭವಿಸಿದ್ದು, ಅದೇ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಇದನ್ನೂ ಓದಿ: ಸಂಬಳ ಕೇಳಲು ಬಂದ ನೌಕರನ ಮೇಲೆ ಕೋಪ: ಮಗನ ಮೇಲೆ ಗುಂಡು ಹಾರಿಸಿದ ಕೋಪಿಷ್ಟ ತಂದೆ..!