ಮಂಗಳೂರು: ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿ ಆಕೆಯನ್ನು ಗರ್ಭಿಣಿಯಾಗಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗೆ 10 ವರ್ಷ ಕಠಿಣ ಸಜೆ ಮತ್ತು 10 ಸಾವಿರ ರೂ. ದಂಡ ವಿಧಿಸಿ 2ನೇ ಹೆಚ್ಚುವರಿ ಸತ್ರ ಮತ್ತು ವಿಶೇಷ ನ್ಯಾಯಾಲಯ ಸೋಮವಾರ ತೀರ್ಪು ನೀಡಿದೆ.
ಬಂಟ್ವಾಳ ತಾಲೂಕು ಸಜಿಪ ಮುನ್ನೂರು ಶಾರದಾನಗರ ನಿವಾಸಿ ಆರೋಪಿ ಸಂತೋಷ್ (34) ಎಂಬಾತನಿಗೆ 10 ವರ್ಷ ಕಠಿಣ ಸಜೆ ಮತ್ತು 10 ಸಾವಿರ ರೂ. ದಂಡ ವಿಧಿಸಿ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.
ಪ್ರಕರಣ ವಿವರ...
2014ರಲ್ಲಿ ಅಪ್ರಾಪ್ತ ಬಾಲಕಿಯೊಬ್ಬಳನ್ನು ವಿವಾಹಿತ ಸಂತೋಷ್, ಗುಡ್ಡಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ನಡೆಸಿದ್ದ. ಯಾರಿಗಾದರು ಹೇಳಿದರೆ ಅಪಪ್ರಚಾರ ಮಾಡುವುದಾಗಿ ಬೆದರಿಕೆ ಹಾಕಿದ್ದ.
ಬಳಿಕ ಪ್ರತಿ ಭಾನುವಾರ ಆಕೆಯನ್ನು ಅದೇ ಪ್ರದೇಶಕ್ಕೆ ಬರಲು ಹೇಳಿ ಅತ್ಯಾಚಾರ ನಡೆಸಿದ್ದ. ಇದರಿಂದ ಬಾಲಕಿ ಗರ್ಭಿಣಿಯಾಗಿದ್ದು, 2015ರ ಜುಲೈ 25ರಂದು ಬಾಲಕಿ ಆಸ್ಪತ್ರೆಯಲ್ಲಿ ಹೆಣ್ಣುಮಗುವಿಗೆ ಜನ್ಮ ನೀಡಿದ್ದಳು. ಆಸ್ಪತ್ರೆಯವರಿಂದ ಪೊಲೀಸರಿಗೆ ಮಾಹಿತಿ ತಿಳಿದು ಬಂಟ್ವಾಳ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿತ್ತು.
ಎರಡನೇ ಹೆಚ್ಚುವರಿ ಸತ್ರ ಮತ್ತು ವಿಶೇಷ ನ್ಯಾಯಾಲಯದ ನ್ಯಾಯಾಧೀಶೆ ಬಿ.ಆರ್.ಪಲ್ಲವಿ ಪ್ರಕರಣದ ವಿಚಾರಣೆ ನಡೆಸಿದ್ದಾರೆ. 13 ಸಾಕ್ಷಿ ಮತ್ತು 19 ದಾಖಲೆಗಳನ್ನು ಸಾಕ್ಷಿಗಳಾಗಿ ಪರಿಗಣಿಸಿದ್ದಾರೆ. ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಐಪಿಸಿ ಸೆಕ್ಷನ್ 376 ಮತ್ತು ಕಲಂ 6ರ ಪೋಕ್ಸೋ ಕಾಯ್ದೆಯಡಿ ಅಪರಾಧಿಗೆ 10 ವರ್ಷ ಕಠಿಣ ಸಜೆ ಮತ್ತು 10 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ದಂಡದಲ್ಲಿ 7,500 ರೂ. ಸಂತ್ರಸ್ತ ಬಾಲಕಿಗೆ ನೀಡಬೇಕು ಹಾಗೂ ಸಿಆರ್‌ಪಿಸಿ ಸೆಕ್ಷನ್ 357(ಎ) ಪ್ರಕಾರ ಕಾನೂನು ಸೇವಾ ಪ್ರಾಧಿಕಾರದಿಂದ ಪರಿಹಾರ ಪಡೆಯಲು ಅರ್ಹರೆಂದು ಆದೇಶದಲ್ಲಿ ತಿಳಿಸಿದ್ದಾರೆ.