ಮಂಗಳೂರು: ಕೊರೊನಾ ಲಾಕ್ಡೌನ್ನಿಂದ ವಿದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರುವ 'ವಂದೇ ಮಾತರಂ ಮಿಷನ್' ಬೃಹತ್ ಏರ್ ಲಿಫ್ಟ್ ಈಗಾಗಲೇ ಕಾರ್ಯ ಆರಂಭಿಸಿದೆ. ಕೇರಳ ರಾಜ್ಯಕ್ಕೆ ಎರಡು ವಿಮಾನಗಳ ಮೂಲಕ ಸುಮಾರು 354 ಮಂದಿ ವಲಸೆ ಭಾರತೀಯರು ಆಗಮಿಸಿದ್ದಾರೆ.
ಎರಡನೇ ವಿಮಾನ ದುಬೈನಿಂದ ವಲಸೆ ಭಾರತೀಯರನ್ನು ಹೊತ್ತು ತಂದಿದ್ದು, ಇದರ ನೇತೃತ್ವವನ್ನು ವಹಿಸಿಕೊಂಡಿದ್ದ ಪೈಲಟ್ ಕುಡ್ಲದ ಯುವಕ ಮೈಕಲ್ ಸಲ್ಡಾನ ಎಂಬುದು ಸಂತೋಷದ ವಿಚಾರ. ಗುರುವಾರ ಅಬುಧಾಬಿ ಹಾಗೂ ದುಬೈನಿಂದ ವಲಸೆ ಭಾರತೀಯರು ಕೇರಳಕ್ಕೆ ಆಗಮಿಸಿದ್ದಾರೆ. ಇದರಲ್ಲಿ ದುಬೈನಿಂದ ಬಂದಿರುವ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನದಲ್ಲಿ 177 ಮಂದಿ ಭಾರತೀಯರನ್ನು ಮೈಕಲ್ ಸಲ್ಡಾನಾ ಅವರು ಸುರಕ್ಷಿತವಾಗಿ ಕೇರಳದ ಕಲ್ಲಿಕೋಟೆಗೆ ತಂದು ಇಳಿಸಿದ್ದಾರೆ. ಈ ಕೆಲಸ ಮಾಡಲು ನನ್ನನ್ನು ಯಾರೂ ಒತ್ತಾಯ ಮಾಡಲಿಲ್ಲ. ನಾನೇ ಸ್ವಯಂಪ್ರೇರಿತನಾಗಿ ಒಪ್ಪಿಕೊಂಡೆ ಎಂದು ಮೈಕಲ್ ಹೇಳಿದ್ದಾರೆ.
ಇದು ಅಪಾಯದ ಕೆಲಸ ಎಂದು ಗೊತ್ತಿದ್ದರೂ ದೇಶ ಸೇವೆ ಮಾಡಬೇಕೆಂಬ ಉದ್ದೇಶದಿಂದ ನಾನು ಈ ಕೆಲಸಕ್ಕೆ ಒಪ್ಪಿದೆ. ಜನರನ್ನು ಕರೆತರುವ ಮುನ್ನ ಪೈಲಟ್, ಕೋ-ಪೈಲಟ್ ಸೇರಿ ವಿಮಾನ ಸಿಬ್ಬಂದಿಗೆ ತಜ್ಞ ವೈದ್ಯರಿಂದ ಪರಿಸ್ಥಿತಿಯನ್ನು ನಿಭಾಯಿಸುವ ಬಗ್ಗೆ ತರಬೇತಿ ನೀಡಲಾಗಿತ್ತಂತೆ. ಎಲ್ಲರಿಗೂ ಪಿಪಿಇ ಕಿಟ್ ಧರಿಸುವುದು ಕಡ್ಡಾಯವಾಗಿದ್ದು, ಏರ್ಲಿಫ್ಟ್ಗೂ ಮುನ್ನ ಕೋವಿಡ್-19 ಟೆಸ್ಟ್ಗೆ ಒಳಗಾಗಬೇಕಿತ್ತಂತೆ. ಅಲ್ಲದೆ ಕಲ್ಲಿಕೋಟೆಗೆ ಬಂದು ಇಳಿದ ನಂತರವೂ ಮತ್ತೊಮ್ಮೆ ಸ್ವ್ಯಾಬ್ ಟೆಸ್ಟ್ ನೀಡಿದ್ದಾರಂತೆ.
ಮೇ 6 ರಂದು ಕಲ್ಲಿಕೋಟೆಯಿಂದ ದುಬೈಗೆ ಬಂದಿಳಿದ ನಂತರ 177 ಮಂದಿ ಭಾರತೀಯರು ನಮ್ಮ ಧ್ವಜವನ್ನು ಹಿಡಿದು ನಿಂತಿದ್ದರು. ಅದನ್ನು ನೋಡಿ ನನಗೆ ದೇಶ ಪ್ರೇಮ ಉಕ್ಕಿ ಹರಿಯಿತು. ಮರುದಿನವೇ ಸುರಕ್ಷಿತವಾಗಿ ಅವರೆಲ್ಲರನ್ನು ಕಲ್ಲಿಕೋಟೆಗೆ ಬಂದು ಇಳಿಸಿದ್ದೇನೆ. ಏರ್ಲಿಫ್ಟ್ನಲ್ಲಿ ಬಂದ ಪ್ರಯಾಣಿಕರಲ್ಲಿ 8 ಮಂದಿ ಗರ್ಭಿಣಿಯರು, 5 ಮಂದಿ ಮಕ್ಕಳು, 9 ಮಂದಿ ವ್ಹೀಲ್ ಚೇರ್ನಲ್ಲಿ ಇರುವವರೂ ಇದ್ದರು. ತಾಯ್ನೆಲಕ್ಕೆ ಬಂದು ತಲುಪಿದ ಕೂಡಲೇ ಎಲ್ಲರೂ ನನಗೆ ಕೃತಜ್ಞತೆ ಸಲ್ಲಿಸಿದರು, ಇದರಿಂದ ನನಗೆ ಧನ್ಯತಾ ಭಾವ ಮೂಡಿತು ಎಂದು ಮೈಕಲ್ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.