ಮಂಗಳೂರು (ದ.ಕ) : ಲಾಕ್ಡೌನ್ನಿಂದ ಎರಡು ತಿಂಗಳುಗಳ ಕಾಲ ಮಾಲ್ಗಳು ಸಂಪೂರ್ಣ ಸ್ತಬ್ಧವಾಗಿದ್ದವು. ಕೇಂದ್ರ ಸರ್ಕಾರದ 'ಅನ್‌ಲಾಕ್ 1.0' ಘೋಷಣೆಯಿಂದ ಇಂದಿನಿಂದ ನಗರದಲ್ಲಿ ಮಾಲ್ಗಳು ತೆರೆದಿವೆ. ಆದರೆ, ಜನರಿಲ್ಲದೆ ಬಿಕೋ ಎನ್ನುತ್ತಿವೆ.
ನಗರದ ಫೋರಂ ಫಿಝಾ ಮಾಲ್ ಹಾಗೂ ಸಿಟಿ ಸೆಂಟರ್ ಮಾಲ್ ಪೂರ್ವ ಸಿದ್ಧತೆಗೊಂಡು ಜನರ ಆಗಮನದ ನಿರೀಕ್ಷೆಯಲ್ಲಿದ್ದವು. ಆದರೆ, ಜನ ವಿರಳವಾಗಿರೋದ್ರಿಂದ ಮಾಲ್ಗಳು ಪೂರ್ತಿ ಭಣಗುಟ್ಟುತ್ತಿವೆ. ನಗರದ ಪಾಂಡೇಶ್ವರದಲ್ಲಿರುವ ಫೋರಂ ಫಿಝಾ ಮಾಲ್‌ನಲ್ಲಿ ಜನರ ಆಗಮನಕ್ಕೆ ವ್ಯವಸ್ಥಿತವಾಗಿ ಸಿದ್ಧತೆ ಮಾಡಲಾಗಿದೆ. ಸರ್ಕಾರದ ಆದೇಶದಂತೆ ಮಾಲ್ಗಳನ್ನು ಸಂಪೂರ್ಣ ಸ್ವಚ್ಛಗೊಳಿಸಿ ಮಾಲ್‌ನ ಪ್ರಮುಖ ದ್ವಾರದ ಬಳಿ ಸ್ಕ್ರೀನಿಂಗ್ ಮಾಡಲಾಗುತ್ತಿದೆ.
ಅಲ್ಲದೆ ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ ಮಾಡಲಾಗಿದೆ. ಪ್ರವೇಶದ್ವಾರದ ಬಳಿಯೇ ಮಾಲ್ಗೆ ಬರುವವರಿಗೆ ಆರೋಗ್ಯ ಸೇತು ಆ್ಯಪ್ ಡೌನ್ಲೋಡ್ ಮಾಡಲು ಪ್ರೇರೇಪಿಸಲಾಗ್ತಿದೆ. ಮಾಲ್ನೊಳಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ವ್ಯವಸ್ಥಿತ ರೀತಿ ಯೋಜನೆ ರೂಪಿಸಲಾಗಿದೆ. ಎಸ್ಕಲೇಟರ್ನಲ್ಲಿ ಎರಡು ಸ್ಟೆಪ್‌ಗೆ ಒಬ್ಬರಂತೆ ನಿಲ್ಲಲು ಸೂಚಿಸುವ ಪಾದದ ಚಿಹ್ನೆ ಗುರುತಿಸಲಾಗಿದೆ. ಲಿಫ್ಟ್ನಲ್ಲಿ ಲಿಫ್ಟ್ ಬಾಯ್ ಸೇರಿ ನಾಲ್ವರಿಗೆ ಮಾತ್ರ ಅವಕಾಶ. ಎಟಿಎಂ ಎದುರುಗಡೆ ಗುಂಪು ಸೇರದಂತೆ ಪಾದದ ಚಿಹ್ನೆಯ ಗುರುತು ಹಾಕಲಾಗಿದೆ. ಇದರಿಂದ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ಅನುಕೂಲವಾಗಲಿದೆ.
ಅದೇ ರೀತಿ ವಾಶ್ ರೂಂಗಳಲ್ಲಿಯೂ ಪೈಪ್ ಮುಂಭಾಗ ಹಸಿರು, ಕೆಂಪು ಬಣ್ಣದ ಮೂಲಕ ಗುರುತು ಮೂಡಿಸಲಾಗಿದೆ. ಈ ಮೂಲಕ ಕೆಂಪು ಸರತಿಯ ದಿನದಂದು ಜನರು ಕೆಂಪು ಬಣ್ಣದ ಗುರುತಿನ ಪೈಪ್ ಮಾತ್ರ ಬಳಸಬೇಕು. ಹಸಿರು ಸರತಿಯ ದಿನದಂದು ಹಸಿರು ಬಣ್ಣದ ಗುರುತಿನ ಪೈಪ್ ಮಾತ್ರ ಬಳಸಬೇಕು ಎಂಬ ಸೂಚನೆ ನೀಡಲಾಗಿದೆ.
ಅದೇ ರೀತಿ ಎಲ್ಲಾ ಕಡೆಯೂ ಸ್ಯಾನಿಟೈಸರ್ಗಳನ್ನು ಸ್ಪರ್ಶವಿಲ್ಲದೆ ಸುಲಭವಾಗಿ ಪಡೆಯುವಂತೆ ವ್ಯವಸ್ಥೆ ಮಾಡಲಾಗಿದೆ. ಆಗಮನ, ನಿರ್ಗಮನ ದ್ವಾರಗಳನ್ನು ಪ್ರತ್ಯೇಕಿಸಲಾಗಿದೆ. ಇದರಿಂದ ಸಾಮಾಜಿಕ ಅಂತರವನ್ನು ಸುಲಭವಾಗಿ ಕಾಯ್ದುಕೊಳ್ಳಲು ಸಾಧ್ಯವಾಗಲಿದೆ. ಅಲ್ಲದೆ ಪ್ರತಿ ಶಾಪ್ ಮುಂಭಾಗದಲ್ಲಿಯೂ ಸ್ಕ್ರೀನಿಂಗ್ ವ್ಯವಸ್ಥೆ ಇದೆ. ಅಲ್ಲಿ ಗ್ರಾಹಕರ ಹೆಸರು ಹಾಗೂ ದೂರವಾಣಿ ಸಂಖ್ಯೆಯನ್ನೂ ಪಡೆದುಕೊಳ್ಳಲಾಗುತ್ತಿದೆ.
ಫುಡ್ ಕೋರ್ಟ್ಗಳಲ್ಲಿಯೂ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸಾಕಷ್ಟು ವ್ಯವಸ್ಥಿತ ರೀತಿ ಯೋಜನೆ ರೂಪಿಸಲಾಗಿದೆ. ಕೋವಿಡ್-19 ಸೋಂಕು ಹರಡದಂತೆ ಫೋರಂ ಫಿಝಾ ಮಾಲ್‌ನಲ್ಲಿ ಸಾಕಷ್ಟು ಮುಂಜಾಗೃತೆ ವಹಿಸಲಾಗಿದೆ.