ಮಂಗಳೂರು: ಎಸ್ಇಝಡ್ನ ಮೀನಿನ ಫ್ಯಾಕ್ಟರಿಯಲ್ಲಿ ನಡೆದ ದುರಂತದಲ್ಲಿ ಐವರು ಸಾವನ್ನಪ್ಪಿದ ಪ್ರಕರಣದಲ್ಲಿ ಮೃತಪಟ್ಟವರ ಕುಟುಂಬಕ್ಕೆ ತಲಾ 15 ಲಕ್ಷ ರೂಪಾಯಿ ಪರಿಹಾರ ನೀಡಲು ಕಂಪನಿ ಒಪ್ಪಿಗೆ ಸೂಚಿಸಿದೆ.
ಮೀನಿನ ಫ್ಯಾಕ್ಟರಿಯ ತ್ಯಾಜ್ಯದಲ್ಲಿ ಬಿದ್ದಿದ್ದ ಓರ್ವನನ್ನು ರಕ್ಷಿಸಲು ಹೋಗಿ ಐವರು ಸಾವನ್ನಪ್ಪಿ ಮೂವರು ಅಸ್ವಸ್ಥಗೊಂಡಿದ್ದರು. ಪಶ್ಚಿಮ ಬಂಗಾಳ ಮೂಲದ ಮಹಮ್ಮದ್ ಸಮರುಲ್ಲಾ ಇಸ್ಲಾಂ, ಉಮರುಲ್ಲಾ ಫಾರೂಕ್, ನಿಜಾಮುದ್ದೀನ್, ನಿಜಾಮುದ್ದೀನ್ ಇಸ್ಲಾಂ, ಶರಕತ್ ಅಲಿ ಮೃತಪಟ್ಟಿದ್ದರು. ದುರಂತ ಸಂಭವಿಸಿದ ಬಳಿಕ ಕುಟುಂಬ ಸದಸ್ಯರು ವಿಮಾನ ಮೂಲಕ ಮಂಗಳೂರು ತಲುಪಿದ್ದು, ಅವರಿಗೆ ಮೃತದೇಹ ಕೊಂಡೊಯ್ಯಲು ವ್ಯವಸ್ಥೆ ಮಾಡಲಾಗಿತ್ತು.
ಆದರೆ ಫಿಷ್ ಮಿಲ್ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಕಂಪನಿ ಪರಿಹಾರ ಧನ ನೀಡಬೇಕು. ಅಲ್ಲಿಯವರಗೆ ಮೃತದೇಹ ಕಳುಹಿಸಿಕೊಡಲು ಸಮ್ಮತಿ ನೀಡಲಾಗುವುದಿಲ್ಲ ಎಂದು ಡಿವೈಎಫ್ಐ, ಸಿಐಟಿಯು ನಾಯಕರು ಬೇಡಿಕೆ ಮುಂದಿಟ್ಟಿದ್ದರು. ಹಲವು ಹಂತಗಳ ಮಾತುಕತೆಯ ನಂತರ ಕಂಪನಿ ಮೃತಪಟ್ಟ ಕಾರ್ಮಿಕರ ಪ್ರತಿಯೊಂದು ಕುಟುಂಬಕ್ಕೆ ತಲಾ 15 ಲಕ್ಷ ರೂಪಾಯಿ ಪರಿಹಾರ ನೀಡಲು ಒಪ್ಪಿಗೆಯನ್ನು ಸೂಚಿಸಿತು.
15 ದಿನಗಳಲ್ಲಿ ಕುಟುಂಬದ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸುವುದಾಗಿ ಲಿಖಿತವಾಗಿ ಕುಟುಂಬದ ಸದಸ್ಯರಿಗೆ ಪತ್ರ ನೀಡಲಾಯಿತು. ಇನ್ನೂ ಪಶ್ಚಿಮ ಬಂಗಾಳ ಸರ್ಕಾರ ಮೃತರ ಕುಟುಂಬಗಳಿಗೆ ತಲಾ ಎರಡು ಲಕ್ಷ ಪರಿಹಾರ ಧನ ಘೋಷಿಸಿದ್ದು, ಕರ್ನಾಟಕ ಸರ್ಕಾರ ತಲಾ ಹತ್ತು ಲಕ್ಷ ರೂಪಾಯಿ ನೀಡಬೇಕು ಎಂದು ಡಿವೈಎಫ್ಐ, ಸಿಐಟಿಯು ಆಗ್ರಹಿಸಿವೆ.
ಇದನ್ನೂ ಓದಿ: ಮೀನು ಸಂಸ್ಕರಣಾ ಘಟಕದಲ್ಲಿ ಐವರ ಬಲಿ: ನಾಲ್ವರು ಪೊಲೀಸ್ ವಶಕ್ಕೆ