ಮಂಗಳೂರು : ಕೊರೊನಾ ಮುಂಜಾಗ್ರತೆಯ ಹಿನ್ನೆಲೆ ರಾಜ್ಯ ಸರ್ಕಾರ ವಾರಾಂತ್ಯ ಕರ್ಫ್ಯೂ ಜಾರಿಗೊಳಿಸಿದೆ. ಕರಾವಳಿಯ ಪ್ರಮುಖ ಪ್ರವಾಸಿ ಬೀಚ್‌ಗಳು ಬಣಗುಟ್ಟುತ್ತಿದ್ದು, ಜನರಿಲ್ಲದೆ ಬಿಕೋ ಎನ್ನುತ್ತಿವೆ.
ನಿನ್ನೆ ರಾತ್ರಿಯಿಂದಲೇ ಕಟ್ಟುನಿಟ್ಟಿನ ವಾರಾಂತ್ಯ ಕರ್ಫ್ಯೂ ಜಾರಿಗೊಳಿಸಿರುವ ಹಿನ್ನೆಲೆ ಬೀಚ್‌ಗಳ ಕಡೆಗೆ ಯಾರೂ ಬಾರದೆ ಮನೆಯಲ್ಲಿಯೇ ಇದ್ದು, ಶಿಸ್ತಿನಿಂದಲೇ ಸರ್ಕಾರದ ನಿಯಮವನ್ನು ಪಾಲನೆ ಮಾಡುತ್ತಿದ್ದಾರೆ.
ಅಲ್ಲದೆ ಬೀಚ್ ಬದಿಯಲ್ಲಿ ಸಾಕಷ್ಟು ಅಂಗಡಿ- ಮುಂಗಟ್ಟುಗಳು, ಆಹಾರ ಮಳಿಗೆಗಳು, ಹೊಟೇಲ್‌ಗಳು ಕಾರ್ಯಾಚರಿಸುತ್ತಿವೆ. ಆದರೆ, ಇಂದು ಪ್ರವಾಸಿಗರು ಬಾರದ ಹಿನ್ನೆಲೆಯಲ್ಲಿ ಎಲ್ಲಾ ಅಂಗಡಿಗಳು ಬಂದ್ ಆಗಿವೆ.
ಸದಾ ಸಮುದ್ರ ವಿಹಾರಿಗಳ ಓಡಾಟ, ನೀರಿನಲ್ಲಿ ಆಟವಾಡುವ ಜನರ ಚೀರಾಟವೇ ತುಂಬಿರುತ್ತಿದ್ದ ಬೀಚ್ ಪರಿಸರದಲ್ಲಿ ಇಂದು ಎಷ್ಟು ದೂರಕ್ಕೆ ಕಣ್ಣು ಹಾಯಿಸಿದರೂ ಮರಳ ರಾಶಿ ಕಾಣುತ್ತಿದೆ.
ಪಣಂಬೂರು, ತಣ್ಣೀರುಬಾವಿ, ಸೋಮೇಶ್ವರ, ಸುರತ್ಕಲ್, ಸಸಿಹಿತ್ಲು, ಉಳ್ಳಾಲ ಪರಿಸರಗಳಲ್ಲಿ ಬೀಚ್‌ಗಳಿದ್ದು, ಎಲ್ಲಿಯೂ ಇಂದು ಜನರಿಲ್ಲದೆ ಬರೀ ಸಮುದ್ರ ಮೊರೆತ ಮಾತ್ರ ಕೇಳುತ್ತಿದೆ.