ಮಂಗಳೂರು: ಲಾಕ್ ಡೌನ್ ಇರೋದ್ರಿಂದ ಯಾರನ್ನೂ ಅಪಾರ್ಟ್‌ಮೆಂಟ್ ಒಳಗೆ ಬಿಡದ ಹಿನ್ನೆಲೆಯಲ್ಲಿ ವಿದ್ಯಾರ್ಥಿಯೋರ್ವ ತನ್ನ ಗೆಳೆಯನನ್ನು ಸೂಟ್ ಕೇಸ್ನಲ್ಲಿ ತುಂಬಿಸಿ ರೂಮಿಗೆ ಕರೆದೊಯ್ಯುತ್ತಿದ್ದ ಸಂದರ್ಭ ಸಿಕ್ಕಿಬಿದ್ದ ಘಟನೆ ನಗರದಲ್ಲಿ ನಡೆದಿದೆ.
ನಗರದ ಆರ್ಯ ಸಮಾಜ ರಸ್ತೆಯಲ್ಲಿರುವ ಅಪಾರ್ಟ್ಮೆಂಟ್ನಲ್ಲಿ ಹದಿನಾರು ವರ್ಷದ ವಿದ್ಯಾರ್ಥಿ ಬಾಡಿಗೆಗಿದ್ದ. ಲಾಕ್ ಡೌನ್ ಪರಿಣಾಮ ಒಬ್ಬನೇ ಇರಲು ಕಷ್ಟವಾಗುತ್ತಿತ್ತು. ಆದರೆ ಹೊರಗಿನ ಯಾರನ್ನು ಅಪಾರ್ಟ್‌ಮೆಂಟ್ ಪ್ರವೇಶಕ್ಕೆ ಅಸೋಸಿಯೇಷನ್ ನಿರಾಕರಣೆ ಮಾಡಿತ್ತು. ಪರಿಣಾಮ ಆತ ಇಂದು ಬೆಳಗ್ಗೆ ತನ್ನ ಗೆಳೆಯನೋರ್ವನನ್ನು ಸೂಟ್ ಕೇಸಿನಲ್ಲಿ ತುಂಬಿಸಿ ರೂಮಿಗೆ ಕೊಂಡೊಯ್ಯುವ ಪ್ರಯತ್ನ ಮಾಡಿದ್ದಾನೆ.
ಈ ಸಂದರ್ಭದಲ್ಲಿ ಸೂಟ್‌ಕೇಸ್‌ನೊಳಗಡೆ ಚಲನೆ ಕಂಡು ಬಂದ ಹಿನ್ನೆಲೆ ಅಪಾರ್ಟ್ಮೆಂಟ್ನಲ್ಲಿರುವವರು ಗಾಬರಿಯಾಗಿದ್ದಾರೆ. ವಿಷಯ ಇಡೀ ಅಪಾರ್ಟ್ಮೆಂಟ್ಗೆ ಹಬ್ಬಿ, ಎಲ್ಲರೂ ಸೂಟ್ ಕೇಸ್ ತೆರೆಯುವಂತೆ ಒತ್ತಾಯಿಸಿದ್ದಾರೆ. ಕೊನೆಗೆ ಏನೂ ಮಾಡಲಾಗದ ಸ್ಥಿತಿಗೆ ತಲುಪಿದ ಯುವಕ ಸೂಟ್ ಕೇಸ್ ತೆರೆಯುವಾಗ ಸತ್ಯಾಂಶ ಬಹಿರಂಗವಾಗಿದೆ.
ಕೂಡಲೇ ಈ ವಿಷಯವನ್ನು ಕದ್ರಿ ಪೊಲೀಸರಿಗೆ ತಿಳಿಸಿದ್ದು, ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಇಬ್ಬರನ್ನು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ. ಆಗ ವಿಚಾರ ಬಹಿರಂಗಗೊಂಡಿದ್ದು, ಇಬ್ಬರ ಹೆತ್ತವರಿಗೂ ವಿಚಾರ ತಿಳಿಸಿ ಎಚ್ಚರಿಕೆ ನೀಡಿ ಬಿಡಲಾಗಿದೆ.