ಮಂಗಳೂರು: ಕೊರೊನಾ ಸೋಂಕು ಹರಡದಂತೆ ಲಾಕ್ಡೌನ್ ಮಾಡಲಾಗಿದ್ದು, ಪೊಲೀಸರು, ತುರ್ತು ಸೇವೆಗಳಿಗೆ ನೇಮಕವಾದ ವೈದ್ಯರು, ದಾದಿಯರು, ಸರಕಾರಿ ಇಲಾಖೆಯ ನೌಕರರು ಮಾತ್ರ ಸಮರೋಪಾದಿಯಲ್ಲಿ ಕರ್ತವ್ಯ ನಿರತರಾಗಿದ್ದಾರೆ.
ಆದರೆ ಕರ್ತವ್ಯವನ್ನು ಸರಿಯಾಗಿ ನಿಭಾಯಿಸುವಲ್ಲಿ ಸಹಕಾರಿಯಾಗುವ ವಾಹನಗಳು ಕೆಟ್ಟರೆ ತಲೆ ಕೆಡಿಸಿಕೊಳ್ಳುತ್ತಿದ್ದ ಇವರಿಗೆ ಆಪತ್ಬಾಂಧವನಾಗಿ ಗೌರವ್ ಡಿ. ಶೆಟ್ಟಿ ಸಹಾಯ ಮಾಡುತ್ತಿದ್ದಾರೆ.
ಮಂಗಳೂರಿನ ಹೊರವಲಯದ ಅಡ್ಯಾರ್ ಪದವಿನಲ್ಲಿ ತನ್ನದೇ ಸ್ವಂತ ಗ್ಯಾರೇಜ್ ಹೊಂದಿರುವ ಗೌರವ್ ಡಿ. ಶೆಟ್ಟಿ, ಲಾಕ್ಡೌನ್ ಬಳಿಕ ಪೊಲೀಸರು, ವೈದ್ಯರು, ದಾದಿಯರು, ಸರಕಾರಿ ಇಲಾಖೆಯ ಅಧಿಕಾರಿಗಳ ದ್ವಿಚಕ್ರ ವಾಹನಗಳು ಕೆಟ್ಟರೆ ಉಚಿತವಾಗಿ ರಿಪೇರಿ ಮಾಡಿ ಸಹಾಯ ಮಾಡುತ್ತಿದ್ದಾರೆ.
ಲಾಕ್ಡೌನ್ ಆದೇಶದ ಬಳಿಕ ವಾಹನ ರಿಪೇರಿಗೆ ಕರೆಗಳು ಬರುತ್ತಿದ್ದವು. ಇದರಿಂದ ಉತ್ತೇಜಿತಗೊಂಡ ಗೌರವ್ ಉಚಿತವಾಗಿ ತುರ್ತು ಪರಿಸ್ಥಿತಿಯಲ್ಲಿರುವವರಿಗೆ ಸಹಾಯ ಮಾಡಲು ಮುಂದಾಗಿದ್ದಾರೆ.
ಆ ನಂತರ ಸುಮಾರು 15ಕ್ಕಿಂತಲೂ ಅಧಿಕ ಪೊಲೀಸ್ ಹಾಗೂ ದಾದಿಯರ ದ್ವಿಚಕ್ರ ವಾಹನಗಳನ್ನು ರಿಪೇರಿ ಮಾಡಿದ್ದಾರಂತೆ. ಸ್ಪೇರ್ ಪಾರ್ಟ್ಸ್ ಹಾಕದೆ ಕೇವಲ ರಿಪೇರಿ ಆದರೆ ಯಾವುದೇ ಹಣ ಬಯಸದ ಇವರು, ಸ್ಪೇರ್ ಪಾರ್ಟ್ಸ್ಗಳಿಗೆ ಮಾತ್ರ ನಿಗದಿತ ಹಣ ಪಡೆಯುತ್ತಾರಂತೆ.
ಇವರ ಈ ಕಾರ್ಯದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ಗಳು ಬಂದ ಮೇಲೆ ಇದೀಗ ಕೊರೊನಾ ವಾರಿಯರ್ಗಳಿಂದ ದಿನಕ್ಕೆ 15-20 ಕರೆಗಳಾದರೂ ಬರುತ್ತಿದೆಯಂತೆ. ಎಲ್ಲಾ ಕರೆಗಳ ವಾಹನಗಳನ್ನು ಹೋಗಿ ರಿಪೇರಿ ಮಾಡುವ ಇವರು, ಕೆಲವೊಂದು ವಾಹನಗಳನ್ನು ಮನೆಯಲ್ಲಿರುವ ಗ್ಯಾರೇಜ್ನಲ್ಲೇ ರಿಪೇರಿ ಮಾಡುತ್ತಿದ್ದಾರಂತೆ. ಇದೀಗ ಗೌರವ್ಗೆ ವಾಹನಗಳ ರಿಪೇರಿಗೆ ಎಲ್ಲಾ ಕಡೆ ನಿರಾತಂಕವಾಗಿ ಹೋಗಬೇಕಾದರೆ ಪಾಸ್ನ ಅಗತ್ಯವಿದೆಯಂತೆ. ಆದ್ದರಿಂದ ಜಿಲ್ಲಾಡಳಿತ ಈ ಕೊರೊನಾ ವಾರಿಯರ್ಗಳ ಸಹಾಯಕನಿಗೆ ಪಾಸ್ ಕೊಡಬೇಕಾಗಿದೆ.