ಮಂಗಳೂರು: ಮಳಲಿಯ ಮಸೀದಿಯ ನವೀಕರಣ ಕಾಮಗಾರಿ ವೇಳೆ ದೇಗುಲ ಶೈಲಿ ಕಟ್ಟಡ ಪತ್ತೆ ವಿಚಾರಕ್ಕೆ ಸಂಬಂಧಿಸಿದಂತೆ ವಿಶ್ವ ಹಿಂದೂ ಪರಿಷತ್ (ವಿಹೆಚ್ಪಿ) ಸಲ್ಲಿಸಿದ ಅರ್ಜಿಯನ್ನು ವಜಾಗೊಳಿಸುವಂತೆ ಮಸೀದಿ ಆಡಳಿತ ಸಮಿತಿ ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ಜೂನ್ 6 ಕ್ಕೆ ಮುಂದೂಡಿದೆ.
ಮಂಗಳೂರಿನ ಮೂರನೇ ಜೆಎಂಎಫ್ಸಿ ನ್ಯಾಯಾಲಯದಲ್ಲಿ ಮಳಲಿ ಮಸೀದಿ ವಿವಾದಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಯುತ್ತಿದೆ. ಎ.21 ರಂದು ನವೀಕರಣ ಕಾಮಗಾರಿ ವೇಳೆ ದೇಗುಲ ಶೈಲಿ ಕಟ್ಟಡ ಪತ್ತೆಯಾಗಿತ್ತು. ಈ ವಿಚಾರದಲ್ಲಿ ವಿಹಿಂಪ ನ್ಯಾಯಾಲಯದ ಮೆಟ್ಟಿಲೇರಿ ತಡೆಯಾಜ್ಞೆ ತಂದಿತ್ತು. ಇದರ ವಿಚಾರಣೆಯನ್ನು ನ್ಯಾಯಾಲಯ ಜೂನ್ 3 ಕ್ಕೆ ಮುಂದೂಡಿಕೆ ಮಾಡಿತ್ತು.
6ಕ್ಕೆ ಮುಂದೂಡಿಕೆ: ಇದರ ಮಧ್ಯೆ ಮಸೀದಿ ಆಡಳಿತ ಮಂಡಳಿಯು ವಿಹಿಂಪ ಸಲ್ಲಿಸಿದ ಅರ್ಜಿಯನ್ನು ವಜಾಗೊಳಿಸುವಂತೆ ಅರ್ಜಿ ಸಲ್ಲಿಸಿತ್ತು. ಇದರ ವಿಚಾರಣೆಯನ್ನು ಮಂಗಳವಾರ ಕೈಗೆತ್ತಿಕೊಂಡ ನ್ಯಾಯಾಲಯ ಇಂದಿಗೆ ಮುಂದೂಡಿತ್ತು. ಇಂದು ವಿಚಾರಣೆ ನಡೆಸಿದ ನ್ಯಾಯಾಲಯ ಮುಂದಿನ ವಿಚಾರಣೆಯನ್ನು ಜೂನ್ 6 ಕ್ಕೆ ಮುಂದೂಡಿದೆ.
ಜ್ಞಾನವಾಪಿಯಂತೆ ಸರ್ವೇ: ವಿಎಚ್ಪಿ ಪರ ವಕೀಲ ಎಂ. ಚಿದಾನಂದ ಕೆದಿಲಾಯ ಅವರು ಇಸ್ಲಾಂನ ಪ್ರಕಾರ ನಮಾಜ್ ಎಲ್ಲಿ ಬೇಕಿದ್ದರೂ ಮಾಡಬಹುದು. ಆದುದರಿಂದ ಮಸೀದಿ ಸ್ಥಳವನ್ನು ಸರ್ವೇ ಮಾಡಲು ನ್ಯಾಯಾಲಯ ತಕ್ಷಣ ಆದೇಶಿಸಬೇಕು. ಜ್ಞಾನವಾಪಿಯಂತೆಯೇ ಈ ಮಳಲಿ ದರ್ಗಾವನ್ನು ಗಣನೆಗೆ ತೆಗೆದುಕೊಳ್ಳಬೇಕು. ಜ್ಞಾನವಾಪಿಯಂತೆಯೇ ಮಳಲಿ ದರ್ಗಾದಲ್ಲಿಯೂ ವಿಡಿಯೋ ಚಿತ್ರೀಕರಣ ಮಾಡಬೇಕು ಎಂದು ವಾದಿಸಿದರು.
ಮಸೀದಿ ಪರ ವಾದ: ಮಸೀದಿ ಜಾಗದ ಸರ್ವೇ ಮನವಿಗೆ ದರ್ಗಾ ಕಮಿಟಿ ಪರ ವಕೀಲ ಎಂ.ಪಿ ಶೆಣೈ ಆಕ್ಷೇಪ ವ್ಯಕ್ತಪಡಿಸಿ ವಿ.ಎಚ್.ಪಿ ಪರ ವಕೀಲರ ಮನವಿ ಪುರಸ್ಕರಿಸದಂತೆ ವಾದ ಮಾಡಿದರು. ಮಳಲಿ ದರ್ಗಾಕ್ಕೆ ನೂರಾರು ವರ್ಷಗಳ ಇತಿಹಾಸವಿದ್ದು, ಹಲವು ವರ್ಷಗಳಿಂದ ಮುಸ್ಲಿಮರು ಪ್ರಾರ್ಥನೆ ಮಾಡುತ್ತಿದ್ದಾರೆ. ಅಲ್ಲದೇ ಈ ಜಾಗದಲ್ಲಿ ದಫನ ಭೂಮಿಯು ಇದ್ದು, ಇದಕ್ಕೆ ಎಲ್ಲದಕ್ಕೂ ದಾಖಲೆಯು ಇದೆ.
ಸ್ಥಳೀಯ ಪಂಚಾಯತ್ ಅನುಮತಿಯನ್ನು ಪಡೆದು ನವೀಕರಣ ಮಾಡಲಾಗುತ್ತಿದೆ. ಕೇವಲ ವಾಸ್ತುಶಿಲ್ಪ ಹಿಂದೂ ದೇವಸ್ಥಾನದಂತಿದೆ ಅನ್ನುವ ವಾದ ಸರಿಯಲ್ಲ. ಇದು ವಕ್ಫ್ ಆಸ್ತಿ, ಸರ್ಕಾರದ ದಾಖಲೆಯಲ್ಲೂ ಉಲ್ಲೇಖ ಇದೆ. ಮಳಲಿ ಮಸೀದಿಯನ್ನು ಜ್ಞಾನವಾಪಿ ಪ್ರಕರಣಕ್ಕೆ ಹೋಲಿಕೆ ಮಾಡುವುದು ಸರಿಯಲ್ಲ. ಕೋರ್ಟ್ ಕಮಿಷನರ್ ನೇಮಿಸಿ ಸರ್ವೇ ಮಾಡುವ ಮನವಿಯನ್ನು ತಿರಸ್ಕರಿಸಬೇಕೆಂದು ವಾದಿಸಿದರು.
ಇದನ್ನೂ ಓದಿ: ಮಕ್ಕಳಿಗೆ ಮೊಬೈಲ್ ಕೊಡುವ ಮುನ್ನ ಎಚ್ಚರ: ಹಾರರ್ ವಿಡಿಯೋದಿಂದ ಪ್ರಭಾವಿತನಾಗಿ ಬಾಲಕ ಏನಾದ ನೋಡಿ!