ಬೆಳ್ತಂಗಡಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ದೀರ್ಘಾಯಸ್ಸು ಹಾಗೂ ಆರೋಗ್ಯ ವೃದ್ಧಿಗಾಗಿ ಧರ್ಮಸ್ಥಳ ಮಂಜುನಾಥಸ್ವಾಮಿ ದೇವಸ್ಥಾನದ ಅಮೃತವರ್ಷಿಣಿ ಸಭಾಭವನದಲ್ಲಿ ಮಹಾಮೃತ್ಯುಂಜಯ ಹೋಮ ನಡೆಸಲಾಯಿತು.
ಶಾಸಕ ಹರೀಶ್ ಪೂಂಜ ನೇತೃತ್ವದಲ್ಲಿ ಬೆಳ್ತಂಗಡಿ ತಾಲೂಕಿನ ಸಮಸ್ತ ಜನತೆಯ ಪರವಾಗಿ ವೇದಮೂರ್ತಿ ನಾಗೇಂದ್ರ ಭಾರದ್ವಾಜ್ ಸುರತ್ಕಲ್ ಅವರ ಪ್ರಧಾನ ಪೌರೋಹಿತ್ಯದಲ್ಲಿ 108 ಪುರೋಹಿತರಿಂದ ಈ ಹೋಮ ನೆರವೇರಿತು.
ಸಪ್ತ ಕುಂಡಗಳಲ್ಲಿ ಹೋಮ:
ಸದ್ಯೋಜಾತ ಕುಂಡ, ವಾಮದೇವ ಕುಂಡ, ಅಘೋರ ಕುಂಡ, ತತ್ಪುರಷ ಕುಂಡ, ಈಶಾನ ಕುಂಡ, ತ್ರಯಂಬಕ ಕುಂಡ, ಮೃತ್ಯುಂಜಯ ಕುಂಡ.. ಹೀಗೆ ಸಪ್ತ ಪ್ರಧಾನ ಹೋಮ ಕುಂಡಗಳಲ್ಲಿ ಹೋಮ ನಡೆಸಿ, ಪ್ರಧಾನ ಕುಂಡದಲ್ಲಿ ಕಲ್ಪೋಕ್ತ ಪೂಜೆ ಕೈಗೊಳ್ಳಲಾಯಿತು. ಬಳಿಕ ಎಲ್ಲರ ಸಮ್ಮುಖದಲ್ಲಿ ಮಹಾ ಪೂರ್ಣಾಹುತಿ ನಡೆಯಿತು.
ಇದಕ್ಕೂ ಮುನ್ನ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ಸಮ್ಮುಖದಲ್ಲಿ ಭಾನುವಾರ ಸಂಜೆ ಸಾಮೂಹಿಕ ಪ್ರಾರ್ಥನೆ, ಪುಣ್ಯಹವಾಚನ, ಯಾಗ ಮಂಟಪ ಶುದ್ದಿ, ಋತ್ವಿಕ್ ವರಣಿ, ವಾಸ್ತು ಬಲಿ, ವಾಸ್ತು ಹೋಮ, ಸ್ಥಳ ಶುದ್ಧಿ, ಕಲಶ ಪ್ರತಿಷ್ಠೆ, ಅರಣಿಯಲ್ಲಿ ಅಗ್ನಿಜನನ, ಒಂದು ಲಕ್ಷ ಮೃತ್ಯುಂಜಯ ಜಪ ಆರಂಭ, ಶತರುದ್ರ ಪಾರಾಯಣ, ಮಹಾಪೂಜೆ, ಅಷ್ಟವಧಾನ ಸೇವೆ ನೆರವೇರಿದ್ದವು.
ರಾಷ್ಟ್ರನಾಯಕರಿಗೆ ಯಾವುದೇ ದೋಷವಿದ್ದರೂ ಅದು ದೂರವಾಗಬೇಕೆಂಬ ಉದ್ದೇಶದಿಂದ ರಾಜ್ಯದ ಜನತೆ ಪರವಾಗಿ ಶಾಸಕ ಹರೀಶ್ ಪೂಂಜ ಮಹಾ ಮೃತ್ಯುಂಜಯ ಹೋಮ ನಡೆಸಿದ್ದಾರೆ. ವಿಶೇಷ ಋತ್ವಿಜರಿಂದ ಮಂಜುನಾಥನ ಸನ್ನಿಧಿಯಲ್ಲಿ ನಡೆದ ಈ ಹೋಮ ಎಲ್ಲರಿಗೂ ಶುಭ ತರಲಿದೆ ಎಂದು ಧರ್ಮಾಧಿಕಾರಿ ತಿಳಿಸಿದರು.
ಈ ಮಹಾ ಮೃತ್ಯುಂಜಯ ಹೋಮಕ್ಕಿಂತ ಮುನ್ನ ತಾಲೂಕಿನ ಸುಮಾರು 25 ಶಿವ ದೇವಾಲಯದಲ್ಲಿ ಮೃತ್ಯುಂಜಯ ಹೋಮ ಮತ್ತು ಪ್ರಾರ್ಥನೆ ನಡೆಸಲಾಗಿತ್ತು. ಮೃತ್ಯುಂಜಯ ಹೋಮದ ಧಾರ್ಮಿಕ ವಿಧಿ ವಿಧಾನದಲ್ಲಿ ಶಾಸಕ ಹರೀಶ್ ಪೂಂಜ ದಂಪತಿ ಭಾಗಿಯಾದರು. ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ, ಹೇಮಾವತಿ ವಿ. ಹೆಗ್ಗಡೆ, ಡಿ.ಹರ್ಷೇಂದ್ರ ಕುಮಾರ್, ಸಚಿವರಾದ ಕೆ.ಎಸ್.ಈಶ್ವರಪ್ಪ, ಸಿ.ಸಿ.ಪಾಟೀಲ್, ಶಶಿಕಲಾ ಜೊಲ್ಲೆ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಇದನ್ನೂ ಓದಿ: ವಾರ್ಷಿಕ ಮೆರವಣಿಗೆ ವೇಳೆ ಪಳನಿ ದೇವಸ್ಥಾನದ 400 ವರ್ಷಗಳಷ್ಟು ಹಳೆಯದಾದ ಶೂಲಗಳು ನಾಪತ್ತೆ; ತನಿಖೆ ಶುರು