ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳದ ಭಗವಾನ್ ಬಾಹುಬಲಿಯ ಮಹಾಮಸ್ತಕಾಭಿಷೇಕದ ಅಂಗವಾಗಿ ಶ್ರೀ ಚಂದ್ರನಾಥ ಸ್ವಾಮಿ ಬಸದಿಯಿಂದ ರತ್ನಗಿರಿ ಬೆಟ್ಟಕ್ಕೆ ಚಂದ್ರನಾಥ ದೇವರು ಹಾಗೂ ತೀರ್ಥಂಕರರ ಮೆರವಣಿಗೆ ಇಂದು ಬೆಳಗ್ಗೆ ನಡೆಯಿತು.
ಮೊದಲಿಗೆ ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿ ಹಾಗೂ ಶ್ರೀ ಚಂದ್ರನಾಥ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ, ಈ ಮೆರವಣಿಗೆಯನ್ನು ಉದ್ಘಾಟಿಸಲಾಯಿತು. ಗಜ, ವೃಷಭ ಸಮೇತವಾದ ವೈಭವದ ಈ ಮೆರವಣಿಗೆಯಲ್ಲಿ ದಿಗಂಬರ ಜೈನ ಮುನಿಗಳು ಭಾಗವಹಿಸಿದ್ದರು. ಬಳಿಕ ರತ್ನಗಿರಿ ಬೆಟ್ಟದಲ್ಲಿ ಸುಮಾರು 35 ಪೂಜಾ ಪುರೋಹಿತರು ಬೇರೆ ಬೇರೆ ಕಡೆಗಳ ಬಸದಿಗಳಿಂದ ತಂದಿದ್ದ ಪ್ರಸಾದವನ್ನು ಡಾ. ಡಿ.ವೀರೇಂದ್ರ ಹೆಗ್ಗಡೆಯವರಿಗೆ ಭಗವಾನ್ ಶ್ರೀ ಬಾಹುಬಲಿಯ ಮಹಾಮಸ್ತಕಾಭಿಷೇಕ ಸಾಂಗವಾಗಿ ನಡೆಯಲೆಂಬಂತೆ ಆಶೀರ್ವಾದವಾಗಿ ನೀಡಲಾಯಿತು.
ಈ ಸಂದರ್ಭ ಇಂದ್ರ ಪ್ರತಿಷ್ಠೆ, ಮಾವಿನ ತೋರಣದ ಧ್ವಜಾರೋಹಣ ಮುಹೂರ್ತ ನಡೆಯಿತು. ಕಾರ್ಕಳದ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿ ಈ ಎಲ್ಲಾ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಈ ಸಂದರ್ಭ ಡಾ. ಡಿ.ವೀರೇಂದ್ರ ಹೆಗ್ಗಡೆ, ಹೇಮಾವತಿ ವಿ. ಹೆಗ್ಗಡೆ, ಸುರೇಂದ್ರ ಕುಮಾರ್, ಹರ್ಷೇಂದ್ರ ಕುಮಾರ್, ರಾಜೇಂದ್ರ ಕುಮಾರ್, ಡಾ. ನಿರಂಜನ್, ಪದ್ಮಲತಾ ಭಾಗವಹಿಸಿದ್ದರು.