ಮಂಗಳೂರು: ಸಿಸಿಬಿ ಪೊಲೀಸರಿಂದ ಐಷಾರಾಮಿ ಕಾರು ಮಾರಾಟ ಪ್ರಕರಣದ ಬಗ್ಗೆ ಸಂಪೂರ್ಣ ವಿಚಾರಣೆ ನಡೆಸಿ ಕೇಂದ್ರ ಕಚೇರಿಗೆ ವರದಿ ಕಳುಹಿಸಲಾಗಿದೆ. ಆದರೆ ಆ ಬಳಿಕ ಮತ್ತೆ ತನಿಖೆ ನಡೆಸಬೇಕೆನ್ನುವ ಸೂಚನೆ ಬಂದಿಲ್ಲ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಹೇಳಿದರು.
ತಮ್ಮ ಕಚೇರಿಯಲ್ಲಿ ಮಾತನಾಡಿದ ಅವರು, ವಂಚನೆ ಪ್ರಕರಣವೊಂದು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಇಕನಾಮಿಕ್, ನಾರ್ಕೊಟಿಕ್ ಆ್ಯಂಡ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡ ಪೊಲೀಸರು, ಮೂರು ಐಷಾರಾಮಿ ಕಾರುಗಳನ್ನು ಸ್ವಾಧೀನಪಡಿಸಿಕೊಂಡಿದ್ದರು. ಆದರೆ ಸಿಸಿಬಿ ಪೊಲೀಸರು ಜಪ್ತಿಯಾಗಿರುವ ವಾಹನಗಳಲ್ಲಿ ಒಂದು ಕಾರನ್ನು ದಾಖಲೆಗಳಲ್ಲಿ ತೋರಿಸದೆ ಮಾರಾಟ ಮಾಡಲಾಗಿತ್ತು. ಮತ್ತೆರಡು ಕಾರುಗಳನ್ನು ದುರ್ಬಳಕೆ ಮಾಡಿದ್ದಾರೆನ್ನುವ ಆರೋಪ ಕೇಳಿ ಬಂದಿತ್ತು.
ಈ ಹಿನ್ನೆಲೆಯಲ್ಲಿ ಡಿಸಿಪಿ ವಿನಯ್ ಗಾಂವ್ಕರ್ ಅವರಿಂದ ತನಿಖೆ ನಡೆಸಲಾಗಿತ್ತು. ಪ್ರಾಥಮಿಕ ತನಿಖೆಯಲ್ಲಿ ಜಾಗ್ವಾರ್ ಕಾರನ್ನು ಬೆಂಗಳೂರು ಮೂಲದ ವ್ಯಕ್ತಿಯೋರ್ವರಿಗೆ ಮಾರಾಟ ಮಾಡಿದ್ದು ಸಾಬೀತಾಗಿತ್ತು. ಮತ್ತೆರಡು ವಾಹನಗಳನ್ನು ವಶಕ್ಕೆ ತೆಗೆದುಕೊಂಡಿರುವ ಸಮಯಕ್ಕೂ ಅದನ್ನು ತನಿಖಾಧಿಕಾರಿಯ ಮುಂದೆ ಹಾಜರು ಪಡಿಸಿರುವ ಕಾಲಕ್ಕೂ ಸಾಕಷ್ಟು ಸಮಯದ ವ್ಯತ್ಯಾಸವಿತ್ತು. ಇದೀಗ ಈ ಬಗ್ಗೆ ತನಿಖೆ ನಡೆಸಿ ಕೇಂದ್ರ ಕಚೇರಿಗೆ ವರದಿ ಕಳುಹಿಸಲಾಗಿದೆ ಎಂದು ಎನ್.ಶಶಿಕುಮಾರ್ ಹೇಳಿದರು.