ಮಂಗಳೂರು: ಇಂದು ಚಂದ್ರಗ್ರಹಣ ನಡೆಯುತ್ತಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಪುಣ್ಯ ಕ್ಷೇತ್ರಗಳಲ್ಲಿ ಪೂಜಾ ಸಮಯದಲ್ಲಿ ಬದಲಾವಣೆ ಮಾಡಲಾಗಿದ್ದು, ಭಕ್ತರು ಎಂದಿನಂತೆ ಸಹಕರಿಸಬೇಕು ಎಂದು ದೇವಸ್ಥಾನಗಳ ಅರ್ಚಕರು ಮನವಿ ಮಾಡಿದ್ದಾರೆ.
ಕುಕ್ಕೆಸುಬ್ರಹ್ಮಣ್ಯದಲ್ಲಿ ಸಂಜೆ 7.30ಕ್ಕೆ ನಡೆಯುವ ಮಹಾಪೂಜೆ 6.30ಗೆ ಜರುಗಲಿದೆ. ಸಂಜೆ ನಡೆಯುವ ಆಶ್ಲೇಷಾ ಪೂಜೆ ಕ್ಷೇತ್ರದಲ್ಲಿ ಇಂದು ನಡೆಯುವುದಿಲ್ಲ. ಧರ್ಮಸ್ಥಳ ಮಂಜುನಾಥೇಶ್ವರ ಕ್ಷೇತ್ರದಲ್ಲಿ ರಾತ್ರಿ9 ಗಂಟೆವರೆಗೆ ನಡೆಯುತ್ತಿದ್ದ ಪೂಜೆ 8 ಗಂಟೆಗೆ ಕೊನೆಗೊಳ್ಳಲಿದೆ.
ಧರ್ಮಸ್ಥಳದ ಅನ್ನಪೂರ್ಣದಲ್ಲಿ 8.30ವರೆಗೆ ಭಕ್ತರಿಗೆ ಊಟದ ವ್ಯವಸ್ಥೆ ಇರಲಿದೆ. ಇನ್ನು ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ರಾತ್ರಿ ಹೂವಿನ ಪೂಜೆ, ರಂಗಪೂಜೆ, ವಿಶೇಷ ಸೇವೆ, ರಾತ್ರಿ ಅನ್ನದಾನದ ವ್ಯವಸ್ಥೆ ಇರುವುದಿಲ್ಲ. ಚಂದ್ರಗ್ರಹಣದ ಹಿನ್ನೆಲೆಯಲ್ಲಿ ಕರಾವಳಿಯ ಪ್ರಮುಖ ಪುಣ್ಯಕ್ಷೇತ್ರದಲ್ಲಿ ಈ ಬದಲಾವಣೆ ಮಾಡಲಾಗಿದೆ. ನಾಳೆ ಎಂದಿನಂತೆ ಪೂಜಾ ಕಾರ್ಯಕ್ರಮಗಳು ಇರಲಿವೆ.