ಮಂಗಳೂರು: ವಿರೋಧ ಪಕ್ಷದವರಿಗೆ ಮಾತನಾಡಲು ಕಾರಣವಿಲ್ಲ. ನಿನ್ನೆಯವರೆಗೆ ಪ್ರವಾಹ ಪರಿಹಾರ ಬಂದಿಲ್ಲ ಎಂದು ಬೊಬ್ಬೆ ಹೊಡೆಯುತ್ತಿದ್ದರು, ಈಗ ಬಂದದ್ದು ಸಾಲೋದಿಲ್ಲ ಎಂದು ಹೇಳುತ್ತಿದ್ದಾರೆ. ಅವರ ಕಾಲದಲ್ಲಿ ಇಲ್ಲಿ ಲೂಟಿ ಮಾಡಿದ್ದೇ ಹೆಚ್ಚಿತ್ತು. ಆ ಲೂಟಿ ಮಾಡಿದ ಹಣವನ್ನೇ ಅವರು ಕೊಡುತ್ತಿದ್ದರೆ ಈಗ ಸಮಸ್ಯೆ ಇರುತ್ತಿರಲಿಲ್ಲ. ಈಗ ಕೇಂದ್ರ ಸರ್ಕಾರದ ಬಗ್ಗೆ ಬೊಟ್ಟು ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿರೋಧ ಪಕ್ಷದವರು ಒಂದು ಬಾರಿ ಅಧ್ಯಯನ ನಡೆಸಿ ರಾಜ್ಯಕ್ಕೆ 2004 ರಿಂದ 2014ರವರೆಗೆ ಎಷ್ಟು ಅನುದಾನ ಬಂದಿದೆ, ನಮ್ಮದು 2014 ರಿಂದ 2019ರ ವರೆಗೆ ಎಷ್ಟು ಅನುದಾನ ಬಂದಿದೆ ಎಂದು ಹೋಲಿಕೆ ಮಾಡಲಿ ಎಂದು ಸವಾಲು ಹಾಕಿದರು.
ಈ 1,200 ಕೋಟಿ ರೂ. ಗೈಡ್ಲೈನ್ನ ಆಧಾರದಲ್ಲಿ ಮಧ್ಯಂತರ ಅನುದಾನ ಬಿಡುಗಡೆಯಾಗಿರುವುದು. ಕೇಂದ್ರ ಸರ್ಕಾರ ರಾಜ್ಯ ವರದಿಯ ಅಂಕಿಅಂಶಗಳನ್ನು ಪರಿಶೀಲಿಸಿ, ಪ್ರವಾಹ ಪರಿಹಾರದ ಅನುದಾನವನ್ನು ಎನ್ಡಿಆರ್ಎಫ್ನ ಗೈಡ್ಲೈನ್ ಆಧಾರದಲ್ಲಿ ಕಳಿಸುತ್ತದೆ. ವಿರೋಧ ಪಕ್ಷದಲ್ಲಿದ್ದವರು ಮುಖ್ಯಮಂತ್ರಿಗಳಾಗಿದ್ದವರೇ, ರಾಜ್ಯ ಸರ್ಕಾರವನ್ನು ನಡೆಸಿದ್ದವರೇ. ಅವರ ಕಾಲದಲ್ಲೂ ಕೇಂದ್ರದಲ್ಲಿ ಅವರದೇ ಸರ್ಕಾರವಿತ್ತು. ಆಗಲೂ ನೆರೆ, ಬರ ಬಂದಿತ್ತು. ಅವರ ಕಾಲದಲ್ಲಿ ಎಷ್ಟು ಪರಿಹಾರ ಬಂದಿತ್ತು, ಈಗ ಎಷ್ಟು ಬಂದಿದೆ ಎಂಬುದರ ಬಗ್ಗೆ ಅವರು ಅವಲೋಕನ ಮಾಡವುದು ಒಳ್ಳೆಯದು ಎಂದು ಕಟೀಲು ಹೇಳಿದರು.