ಸುಬ್ರಹ್ಮಣ್ಯ(ದಕ್ಷಿಣ ಕನ್ನಡ): ಕಡಬ ತಾಲೂಕಿನ ಕೊಂಬಾರು ಗ್ರಾಮದ ಕಮರ್ಕಜೆಯಲ್ಲಿ ಕೋಳಿ ಹಿಡಿಯಲು ಬಂದ ಚಿರತೆಯೊಂದು ಬಾವಿಗೆ ಬಿದ್ದಿತ್ತು. ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿ ಕಾರ್ಯಾಚರಣೆ ನಡೆಸಿ ಚಿರತೆಯನ್ನು ರಕ್ಷಿಸಿದ್ದಾರೆ.
ಕೋಳಿ ಹಿಡಿಯಲೆಂದು ಬಂದ ಚಿರತೆ ಗ್ರಾಮದ ಕಮರ್ಕಜೆ ನಿವಾಸಿ ರಾಮಯ್ಯ ಗೌಡ ಎಂಬುವರ ಮನೆಯ ಮುಂಭಾಗದ ಬಾವಿಗೆ ಬಿದ್ದಿತ್ತು. ತಕ್ಷಣವೇ ಅರಣ್ಯಾಧಿಕಾರಿಗಳಿಗೆ ಈ ಕುರಿತು ಮಾಹಿತಿ ತಿಳಿಸಿದ್ದು, ಸ್ಥಳಕ್ಕೆ ಭೇಟಿ ನೀಡಿದ ಸಿಬ್ಬಂದಿ ಸೂಕ್ತ ಭದ್ರತೆಯೊಂದಿಗೆ ನಿನ್ನೆ ಸಂಜೆ ವೇಳೆ ರಕ್ಷಣಾ ಕಾರ್ಯವನ್ನು ಆರಂಭಿಸಿದ್ದರು.
ಬಾವಿಯ ಕಟ್ಟೆ ಸಮೀಪ ಬೋನ್ ಇಟ್ಟು ಮೇಲಿನ ಭಾಗಕ್ಕೆ ಬಲೆ ಹಾಕಿ, ಕೆಳಗೆ ಏಣಿ ಇಳಿಸಲಾಗಿತ್ತು. ಏಣಿ ಮೂಲಕ ಮೇಲೆ ಹತ್ತಿ ಬಂದ ಚಿರತೆ ನೇರವಾಗಿ ಬೋನಿಗೆ ಬಿದ್ದಿದೆ. ಗ್ರಾಮಸ್ಥರ ಸಹಕಾರದೊಂದಿಗೆ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆಯನ್ನು ಯಶಸ್ವಿಯಾಗಿ ಸೆರೆ ಹಿಡಿದಿದ್ದಾರೆ.