ಮಂಗಳೂರು: ನಗರದ ಮರೋಳಿಯ ಜಯನಗರ, ಕಂಕನಾಡಿ ವ್ಯಾಪ್ತಿಗಳಲ್ಲಿ ಕೆಲ ದಿನಗಳಿಂದ ಕಾಣಿಸುತ್ತಿರುವ ಚಿರತೆ ಹಿಡಿಯಲು ಶನಿವಾರ ಮತ್ತೊಂದು ಸುತ್ತಿನ ಕಾರ್ಯಾಚರಣೆ ನಡೆಸಲಾಗಿದೆ. ಆದರೆ ಚಿರತೆ ಪತ್ತೆಯಾಗಿಲ್ಲ.
ಚಿರತೆ ಸುಳಿವು ಪತ್ತೆಯಾಗದ ಹಿನ್ನೆಲೆಯಲ್ಲಿ ಸದ್ಯ ಕೂಂಬಿಂಗ್ ಕಾರ್ಯವನ್ನು ಸ್ಥಗಿತಗೊಳಿಸಿಸಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಮರೋಳಿ ಜಯನಗರ 4ನೇ ಕ್ರಾಸ್‌ನಲ್ಲಿರುವ ಜನವಸತಿ ಬಳಿ ಅ.3 ಮತ್ತು ಅ.6ರಂದು ಚಿರತೆ ಪ್ರತ್ಯಕ್ಷವಾಗಿತ್ತು. ಇದು ಸ್ಥಳೀಯರಲ್ಲಿ ಭೀತಿ ಸೃಷ್ಟಿಸಿದ್ದು, ಅರಣ್ಯ ಇಲಾಖೆಯು ಚಿರತೆ ಪತ್ತೆಗಾಗಿ ಬೋನು ಇರಿಸಿ ಕಾರ್ಯಾಚರಣೆ ನಡೆಸಿತ್ತು. ಆದರೆ ಆ ಬಳಿಕ ಎರಡು ದಿನಗಳಿಂದೀಚೆಗೆ ಚಿರತೆ ಸುಳಿವು, ಹೆಜ್ಜೆ ಗುರುತು ಕೂಡಾ ಪತ್ತೆಯಾಗಿರಲಿಲ್ಲ.
ಆದರೂ ಶನಿವಾರ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಸಿಬ್ಬಂದಿ ಜೊತೆಗೂಡಿ ಮತ್ತೆ ಕೂಂಬಿಂಗ್ ನಡೆಸಿದ್ದಾರೆ. ಆದರೆ ಯಾವುದೇ ಕುರುಹು ಪತ್ತೆಯಾಗದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ ಎಂದು ವಲಯ ಅರಣ್ಯಾಧಿಕಾರಿ ಪ್ರಶಾಂತ್ ಪೈ ತಿಳಿಸಿದ್ದಾರೆ.