ನೆಲ್ಯಾಡಿ (ದಕ್ಷಿಣ ಕನ್ನಡ): ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಧರ್ಮಸ್ಥಳದಿಂದ ಕುಕ್ಕೆ ಸುಬ್ರಹ್ಮಣ್ಯ ಕಡೆಗೆ ತೆರಳುತ್ತಿದ್ದ ಕೆಎಸ್ಆರ್ಟಿಸಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದ ಘಟನೆ ಗುರುವಾರ ಸಂಜೆ ನಡೆದಿದೆ.
ಚಳ್ಳಕೆರೆಯಿಂದ ಧರ್ಮಸ್ಥಳ ಮಾರ್ಗವಾಗಿ ಕೊಕ್ಕಡ, ಗುಂಡ್ಯ ಮೂಲಕ ಕುಕ್ಕೆ ಸುಬ್ರಹ್ಮಣ್ಯಕ್ಕೆ ತೆರಳುತ್ತಿದ್ದ ಸರ್ಕಾರಿ ಬಸ್ ಉದನೆ-ಎಂಜಿರ ಸಮೀಪದ ಊರ್ನಡ್ಕ ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಘಟನೆಯಲ್ಲಿ ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅಪಾಯದಿಂದ ಪಾರಾದರೆ ಚಾಲಕ ಸೇರಿದಂತೆ ಕೆಲವರಿಗೆ ಹೆಚ್ಚಿನ ಗಾಯಗಳಾಗಿವೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ನಡುವೆ ಘಟನಾ ಸ್ಥಳದಲ್ಲಿದ್ದ ಕೆಲವರು ರಕ್ಷಣಾ ಕಾರ್ಯ ನಿಮಿತ್ತವಾಗಿ ಬಂದ ಆ್ಯಂಬುಲೆನ್ಸ್‌ವೊಂದರ ಕೀ ಕಿತ್ತುಕೊಂಡು ಚಾಲಕನಿಗೆ ಹಲ್ಲೆ ನಡೆಸಲು ಮುಂದಾಗಿದ್ದಾರೆ. ಈ ಬಗ್ಗೆ ಆ್ಯಂಬುಲೆನ್ಸ್ ಚಾಲಕ ದೂರು ನೀಡಲು ಧರ್ಮಸ್ಥಳ ಠಾಣೆಗೆ ತೆರಳಿದ್ದಾರೆ ಎಂದು ತಿಳಿದು ಬಂದಿದೆ.