ಮಂಗಳೂರು: ನಗರದಲ್ಲಿ ನಡೆದ ಗಲಭೆಯಲ್ಲಿ ಗೋಲಿಬಾರ್ಗೆ ಬಲಿಯಾದವರು ಅಮಾಯಕರು ಎಂದು ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ಹಾಗೂ ಯು.ಟಿ.ಖಾದರ್ ಹೇಳುತ್ತಾರೆ. ಆದರೆ ಶಸ್ತ್ರಾಸ್ತ್ರದ ಕೊಠಡಿಯ ಬಾಗಿಲು ಒಡೆದು ಶಸ್ತ್ರಾಸ್ತ್ರಗಳನ್ನು ಕೈಗೆತ್ತಿಕೊಳ್ಳುವುದು ಶಾಂತಿಯುತ ಚಳುವಳಿ ವ್ಯಾಪ್ತಿಯೊಳಗೆ ಬರುತ್ತಾ ಎಂದು ದ.ಕ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಪ್ರಶ್ನಿಸಿದ್ದಾರೆ.
ತಮ್ಮ ಕಚೇರಿಯಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ವ್ಯಾನ್ಗಳ ಮೂಲಕ ಕಲ್ಲುಗಳನ್ನು ತಂದು ಸರಬರಾಜು ಮಾಡುವುದು ಶಾಂತಿಯುತ ಚಳುವಳಿಯೇ?, ಪೊಲೀಸ್ ಠಾಣೆಗೆ ದಿಗ್ಭಂಧನ ಮಾಡುವುದು ಶಾಂತಿಯುತ ಚಳುವಳಿಯ ವ್ಯಾಪ್ತಿಗೆ ಬರುತ್ತಾ? ಈ ಬಗ್ಗೆ ನಿಮ್ಮ ಆತ್ಮವಿಮರ್ಶೆ ಮಾಡಿಕೊಳ್ಳಿ ಎಂದು ತಿರುಗೇಟು ನೀಡಿದರು.
ಯಾರಾದರೂ ಆಗಲಿ ಕಾನೂನು ಕೈಗೆತ್ತಿಕೊಳ್ಳುವಾಗ ತಪ್ಪನ್ನು ತಪ್ಪು ಎಂದು ಪ್ರತಿಪಕ್ಷದವರಾದ ನೀವು ಹೇಳದಿದ್ದರೆ ತಪ್ಪು ಮಾಡಿದವರಿಗೆ ನೀವು ಪ್ರೋತ್ಸಾಹ ಮಾಡಿದಂತಾಗಲಿಲ್ಲವೇ? ಯಾರನ್ನೋ ಓಲೈಸುವ ಭರದಲ್ಲಿ ಅಪರಾಧಿಗಳಿಗೆ ಪ್ರೋತ್ಸಾಹ ನೀಡುವಂತ ಕೆಲಸ ಮಾಡುತ್ತಿದ್ದೀರಿ. ಅನೇಕ ಸಂದರ್ಭದಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿರುವವರು ಮಿತಿ ಮೀರಿ ಮಾತನಾಡಿದಾಗಲೂ ಪ್ರತಿಕ್ರಿಯೆ ತೀಕ್ಷ್ಣವಾಗಿ ಆದರೂ ನಾವು ಚಕಾರವೆತ್ತಿಲ್ಲ. ಪರಿಹಾರ ಕೊಡುವ ಬಗ್ಗೆ ಯಾವ ಗೊಂದಲವೂ ಇರಲಿಲ್ಲ. ಆದರೆ ಆರೋಪಿಗಳಿಗೆ ಪರಿಹಾರ ನೀಡಬಾರದೆಂದು ಸದ್ಯದ ಮಟ್ಟಿಗೆ ಪರಿಹಾರ ನೀಡುವುದನ್ನು ತಡೆಹಿಡಿಯಲಾಗಿದೆ ಎಂದು ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.
ಶಾಂತಿ ಸುವ್ಯವಸ್ಥೆ ಕಾಪಾಡುವ ಸಂದರ್ಭ ಫೈರಿಂಗ್ ಸೇರಿದಂತೆ ಎಲ್ಲಾ ವಿಷಯಗಳನ್ನು ಇಲಾಖೆಯ ಎಲ್ಲಾ ಅಧಿಕಾರಿಗಳು ನಮ್ಮೊಂದಿಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುತ್ತಾರೆ. ಮೊನ್ನೆ ಮಂಗಳೂರಿನಲ್ಲಿ ನಡೆದ ಹಿಂಸಾಚಾರ, ಗಲಭೆ ಪ್ರಕರಣ ಸಂಬಂಧ ನಾನು ಖುದ್ದು ಪೊಲೀಸ್ ಆಯುಕ್ತರು, ಎಸ್ಪಿ ಹಾಗೂ ಜಿಲ್ಲಾಧಿಕಾರಿಯವರೊಂದಿಗೆ ಸಂಪರ್ಕದಲ್ಲಿದ್ದೆ. ಶಾಂತಿ ಕಾಪಾಡುವ ನಿಟ್ಟಿನಲ್ಲಿ ಜಿಲ್ಲಾಡಳಿತ ಬಹಳ ಕಠಿಣವಾದ ನಿರ್ಧಾರ ಕೈಗೊಂಡಿತ್ತು ಎಂದು ಹೇಳಿದರು.