ಮಂಗಳೂರು: ಕೇರಳ ಮೂಲದ ಉದ್ಯಮಿಯೊಬ್ಬರನ್ನು ದುಷ್ಕರ್ಮಿಗಳು ಹಾಡಹಗಲೇ ಅವರ ಮನೆಯಲ್ಲಿಯೇ ಚೂರಿಯಿಂದ ಇರಿದು ಹತ್ಯೆ ಮಾಡಿರುವ ಘಟನೆ ನಗರದ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕಾವೂರು ಮಲ್ಲಿ ಲೇಔಟ್ ನಿವಾಸಿ ಸುರೇಂದ್ರನ್ (60) ಕೊಲೆಯಾದ ವ್ಯಕ್ತಿ. ಫಾರ್ಮ್ ಉದ್ಯಮಿ ಸುರೇಂದ್ರನ್ ಅವರು ಮೂಲತಃ ಕೇರಳದವರಾಗಿದ್ದರು. ಹಲವಾರು ವರ್ಷಗಳಿಂದ ಕಾವೂರು ಮಲ್ಲಿ ಲೇಔಟ್‌ನ ಸ್ವಂತ ಮನೆಯಲ್ಲಿ ಪತ್ನಿಯ ಜತೆ ವಾಸಿಸುತ್ತಿದ್ದರು. ಮಂಗಳವಾರ ಸುರೇಂದ್ರನ್ ನಗರಕ್ಕೆ ಹೋಗಿದ್ದರು. ಅವರ ಪತ್ನಿ ಫಾರ್ಮ್ ಉದ್ಯಮ ವ್ಯವಹಾರ ನೋಡಿಕೊಳ್ಳಲು ತೆರಳಿದ್ದರು.
ಮಧ್ಯಾಹ್ನ 1 ಗಂಟೆ ವೇಳೆಗೆ ಸುರೇಂದ್ರನ್ ಮನೆಗೆ ಮರಳಿ ಬಂದಾಗ ದುಷ್ಕರ್ಮಿಗಳು ಕೊಲೆ ಕೃತ್ಯವೆಸಗಿರಬಹುದು ಎಂದು ತಿಳಿದು ಬಂದಿದೆ. ಸುರೇಂದ್ರನ್ ಅವರ ಪತ್ನಿ ಸಂಜೆ ವೇಳೆ ಮನೆಗೆ ಬಂದಾಗ ಮನೆ ಸುತ್ತ ಜನ ಸೇರಿದ್ದನ್ನು ನೋಡಿ ವಿಷಯ ತಿಳಿಯುತ್ತಿದ್ದಂತೆ ಆಘಾತಕ್ಕೊಳಗಾಗಿದ್ದಾರೆ ಎಂದು ತಿಳಿದು ಬಂದಿದೆ.
ಹತ್ಯೆಗೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ. ವ್ಯವಹಾರ ವೈಷಮ್ಯ ಹಿನ್ನೆಲೆಯಲ್ಲಿ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ. ಈ ಕುರಿತು ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.