ಮಂಗಳೂರು: ಬಂಟ್ವಾಳ ತಾಲೂಕಿನ ಬಾಳ್ತಿಲ ಗ್ರಾಮದ ಕಾಂಪ್ರಬೈಲು ಉಳ್ಳಾಲ್ತಿ ಅಮ್ಮನವರು ಮತ್ತು ಅಜ್ಜಾವರ ದೈವಗಳ ಭಂಡಾರದ ವಿವಾದಕ್ಕೆ ಸಂಬಂಧಿಸಿದಂತೆ ನಾವು ಸಂಪ್ರದಾಯ ಉಲ್ಲಂಘಿಸಿಲ್ಲ. ನ್ಯಾಯಾಲಯದ ಆದೇಶವು ನಮ್ಮ ಕೈ ಸೇರಿಲ್ಲ ಎಂದು ದೈವಸ್ಥಾನದ ವ್ಯವಸ್ಥಾಪನ ಸಮಿತಿ ಸ್ಪಷ್ಟಪಡಿಸಿದೆ.
ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕ್ಷೇತ್ರದ ತಂತ್ರಿ ಶ್ರೀಪತಿ ಭಟ್ ಅವರು, ಬಾಳ್ತಿಲ ಗ್ರಾಮದ ದೈವಗಳ ಭಂಡಾರದ ಮನೆಯಲ್ಲಿ ನಡೆದ ಘಟನೆಯ ಬಳಿಕ, ಈ ವಿಚಾರ ಜೈನ ಮನೆತನ ಹಾಗೂ ಗುತ್ತು ಮನೆತನಗಳ ವಿರುದ್ಧ ಎಂದು ಬಿಂಬಿಸುವ ಪ್ರಯತ್ನವಾಗಿದೆ. ಇದೀಗ ಆರೋಪಿಸಿರುವಂತೆ ಭಂಡಾರವನ್ನು ದೈವಸ್ಥಾನದಲ್ಲಿ ಉಳಿಸಿಕೊಂಡಿಲ್ಲ. ದೈವದ ಭಂಡಾರದ ಮನೆಯಲ್ಲಿ ಉಳಿಸಿಕೊಂಡು ನಿತ್ಯ ಪೂಜೆ ನಡೆಸಲಾಗುತ್ತಿದೆ.
ಕಾಂಪ್ರಬೈಲಿನ ಜೈನಮನೆತನದ ಮನೆಯಲ್ಲಿದ್ದ ಭಂಡಾರವನ್ನು ವಾಪಸು ಕಳುಹಿಸದೇ ದೈವದ ಭಂಡಾರದ ಮನೆಯಲ್ಲಿ ಇರಿಸಿಕೊಳ್ಳುವಂತೆ ತಾಂಬೂಲ ಪ್ರಶ್ನೆಯಲ್ಲಿ ಬಂದ ಸಲಹೆಯಂತೆ ನಿರ್ಧಾರ ಕೈಗೊಳ್ಳಲಾಗಿತ್ತು. ಕಾಂಪ್ರಬೈಲಿನಿಂದ ಭಂಡಾರ ತರುವ ವೇಳೆಯು ಅಸಮ್ಮತಿ ಸೂಚಿಸಿದ ಕಾಂಪ್ರಬೈಲಿನ ಜೈನಮನೆತನದವರು ದೈವದ ಎದುರಿನಲ್ಲಿ ತಂತ್ರಿಗಳು ಕಾಂಪ್ರಬೈಲಿಗೆ ಬಾರದಂತೆ ಪ್ರಮಾಣ ಮಾಡಿದ್ದಾರೆ ಎಂದರು.
ಇನ್ನೂ 6ನೇ ಶತಮಾನದಿಂದ ಬಂದ ಸಂಪ್ರದಾಯದಂತೆ ದೈವದ ಭಂಡಾರವನ್ನು ಭಂಡಾರ ಮನೆಯಲ್ಲಿ ಇರಿಸಲಾಗುತ್ತಿತ್ತು. ಏಳು ದಶಕಗಳ ಹಿಂದೆಯಷ್ಟೇ ಕಾಂಪ್ರಬೈಲಿನ ಜೈನಮನೆತನದಲ್ಲಿ ಇರಿಸಲಾಗಿತ್ತು. ಈ ಬಗ್ಗೆ 4 ದಶಕಗಳ ಹಿಂದೆ ನಡೆದ ತಾಂಬೂಲ ಪ್ರಶ್ನೆಯಲ್ಲಿಯೂ ಅದನ್ನು ಭಂಡಾರದ ಮನೆಯಲ್ಲಿ ಇರಿಸುವಂತೆ ಸಲಹೆ ಬಂದಿತ್ತು. ಇದೀಗ ಮತ್ತೆ ತಾಂಬೂಲ ಪ್ರಶ್ನೆಯಲ್ಲಿ ಬಂದ ಸಲಹೆಯಂತೆ ಭಂಡಾರದ ಮನೆಯಲ್ಲಿ ಇಡಲಾಗಿದೆ ಎಂದರು.
ಇದನ್ನೂ ಓದಿ: ದೈವದ ಭಂಡಾರ ಮರಳಿಸಲು ಬಂಟ್ವಾಳ ದೈವಸ್ಥಾನದ ಆಡಳಿತ ಮಂಡಳಿ ನಕಾರ.. ಸಂಪ್ರದಾಯದ ವಿಚಾರದಲ್ಲಿ ಸಂಘರ್ಷ..
ಇನ್ನು ದೈವದ ಭಂಡಾರವನ್ನು ಕಾಂಪ್ರಬೈಲಿಗೆ ಮತ್ತೆ ವಾಪಸು ನೀಡಬೇಕೆಂಬ ಹೈಕೋರ್ಟ್ ಆದೇಶ ನಮ್ಮ ಕೈ ಸೇರಿಲ್ಲ. ಅದರ ಜೆರಾಕ್ಸ್ ಪ್ರತಿಯನ್ನು ಆಡಳಿತ ಸಮಿತಿಗೆ ನೀಡದೇ ಹೈಕೋರ್ಟ್ ಆದೇಶ ಉಲ್ಲಂಘಿಸಲಾಗಿದೆ ಎಂದು ಆರೋಪಿಸಲಾಗುತ್ತಿದೆ. ನಾವು ನ್ಯಾಯಾಲಯದ ಯಾವುದೇ ಆದೇಶ ಉಲ್ಲಂಘಿಸಿಲ್ಲ ಎಂದರು.