ಮಂಗಳೂರು: ಕಂಬಳ ಕರಾವಳಿಯ ಅತ್ಯಂತ ಜನಪ್ರಿಯ ಹಾಗೂ ಪ್ರತಿಷ್ಠೆಯ ಜಾನಪದ ಕ್ರೀಡೆ. ಇತ್ತೀಚಿನ ವರ್ಷಗಳಲ್ಲಿ ಯುವ ಜನತೆಯಲ್ಲೂ ಕ್ರೇಜ್ ಸೃಷ್ಟಿಸಿರುವ ರೋಮಾಂಚನಕಾರಿ ಕ್ರೀಡೆಯು ಕೇವಲ ಹಳ್ಳಿಗೆ ಮಾತ್ರ ಸೀಮಿತವಾಗಿತ್ತು. ಆದರೆ, ಈ ಕೊರತೆಯನ್ನು ನೀಗಿಸಲು ಕ್ಯಾ.ಬ್ರಿಜೇಶ್ ಚೌಟ ನೇತೃತ್ವದಲ್ಲಿ ಕಳೆದ ಐದು ವರ್ಷಗಳಿಂದ ನಗರದಲ್ಲಿ ಕಂಬಳ ನಡೆಸಲಾಗುತ್ತಿದೆ.
ಈ ಬಾರಿ ನಗರದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಇರುವ ಬಂಗ್ರ ಕೂಳೂರಿನ ಗೋಲ್ಡ್ ಫಿಂಚ್ ಸಿಟಿ ಮೈದಾನದಲ್ಲಿ ಮಂಗಳೂರು ಕಂಬಳ ಆಯೋಜನೆಗೊಂಡಿದೆ. ಕೃಷಿಯ ಅವಿಭಾಜ್ಯ ಅಂಗವಾಗಿರುವ ಕಂಬಳ ಸಾಮಾನ್ಯವಾಗಿ ಗದ್ದೆಯಲ್ಲಿ ನಡೆಯುತ್ತದೆ. ಬಳಿಕ ಅದೇ ಗದ್ದೆಯಲ್ಲಿ ಸುಗ್ಗಿಯ ಭತ್ತದ ಬೆಳೆ ಬೆಳೆಯಲಾಗುತ್ತದೆ.
ಆದರೆ, ಮಂಗಳೂರು ಕಂಬಳದಲ್ಲಿ ವಿಶೇಷವಾಗಿ ಕೃತಕವಾಗಿ ರೂಪಿಸಿರುವ ರಾಮ-ಲಕ್ಷ್ಮಣ ಜೋಡು ಕರೆಯಲ್ಲಿ ಕೋಣಗಳನ್ನು ಓಡಿಸಲಾಗುತ್ತಿದೆ. ಜೋಡಿ ಕೋಣಗಳ ಓಟಕ್ಕೆ ವಿದೇಶಿಗರು ಕೂಡಾ ಫಿದಾ ಆಗಿದ್ದಾರೆ. ಈ ಬಾರಿ 140-150 ಜತೆ ಕೋಣಗಳು ಕರೆಯಲ್ಲಿ ಓಡಲಿವೆ.
ಇತ್ತೀಚಿನ ವರ್ಷಗಳಲ್ಲಿ ಕಂಬಳ ಹೆಚ್ಚು ಪ್ರಸಿದ್ಧಿಯಾಗುತ್ತಿದ್ದು ರಾಷ್ಟ್ರೀಯ, ಅಂತರರಾಷ್ಟ್ರೀಯ ಮಟ್ಟದಲ್ಲೂ ಮನ್ನಣೆ ಪಡೆಯುತ್ತಿದೆ. ಜೊತೆಗೆ ಓಟಗಾರರು ಸಹ ಹೆಚ್ಚು ಅಭಿಮಾನಿಗಳನ್ನು ಹೊಂದಿದ್ದಾರೆ. ಯಾವ ಸ್ಟಾರ್ ಕ್ರೀಡಾಪಟುಗಳಿಗೂ ಕಡಿಮೆಯಿಲ್ಲವೆಂಬಂತೆ ಇವರಿಗೆ ಸನ್ಮಾನಗಳು ಸಲ್ಲುತ್ತಿವೆ. ಅದೇ ರೀತಿ ಕೋಣಗಳು ಸಹ ಮನುಷ್ಯರಿಗೆ ಕಡಿಮೆಯಿಲ್ಲವೇನೋ ಎಂಬಂತೆ ರಾಜ ಮರ್ಯಾದೆ ಪಡೆಯುತ್ತಿವೆ.
ಇದನ್ನೂ ಓದಿ: ಮದುವೆ ನಿಶ್ಚಿತಾರ್ಥಕ್ಕೆ ಹೊರಟ ಬಸ್ ಪಲ್ಟಿ: ಮಗು ಸೇರಿ 8 ಮಂದಿ ಸಾವು, 45 ಜನರಿಗೆ ಗಾಯ