ಬೆಳ್ತಂಗಡಿ (ದಕ್ಷಿಣ ಕನ್ನಡ): ಕನ್ಯಾಡಿ ಶ್ರೀ ಗುರುದೇವ ಮಠದ ಗದ್ದೆಯಲ್ಲಿ ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ವತಿಯಿಂದ ನೇಜಿ ನಾಟಿ ಮಾಡುವ ಕಾರ್ಯಕ್ರಮಕ್ಕೆ ಶ್ರೀರಾಮ ಕ್ಷೇತ್ರದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಮಕ್ಕಳಿಗೆ ಶಿಕ್ಷಣದ ಜೊತೆಗೆ ಕೃಷಿ ಸಂಸ್ಕೃತಿಯ ಬಗೆಗೆ ನಿರಂತರವಾಗಿ ಕಲಿಸಿಕೊಡಬೇಕು. ಕೃಷಿಯ ಕಡೆಗೆ ಗಮನ ಕೊಟ್ಟರೆ, ಎಂದಿಗೂ ದುರ್ಭಿಕ್ಷ್ಯವಿಲ್ಲ. ಸಮಾಜದಲ್ಲಿ ಜಾಗೃತಿಯ ಹೊರತಾಗಿ ಪರಿವರ್ತನೆಯಾಗದು. ಪತ್ರಿಕಾ ಮಾಧ್ಯಮದ ಪ್ರೇರಣೆಯಿಂದ ಪರಿವರ್ತನೆ ಸಾಧ್ಯವಿದೆ. ಬದುಕಿನಲ್ಲಿ ಆರೋಗ್ಯ, ನೆಮ್ಮದಿ ಕಾಣಬೇಕಾದರೆ ಕೃಷಿ ಚಟುವಟಿಕೆಗಳಲ್ಲಿ ತೊಡಗಬೇಕು ಎಂದರು.
ವಿಧಾನ ಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್ ಮಾತನಾಡಿ, ಜನರ ಮನಸ್ಸು ವಾಣಿಜ್ಯೀಕರಣಗೊಂಡಿರುವುದೇ ಭತ್ತದ ಬೆಳೆಯ ವಿಮುಖತೆಗೆ ಕಾರಣ. ಕೊರೊನಾ ಪ್ರಕೃತಿಯ ಜೊತೆಗೆ ಬದುಕುವ ಪಾಠ ಕಲಿಸಿದೆ. ಆತ್ಮನಿರ್ಭರ ಭಾರತದ ಯುವ ಜನಾಂಗಕ್ಕೆ ಕೃಷಿ ಪ್ರೇರಣೆಯಾಗಲಿ ಎಂದರು.
ಬಳಿಕ ಮಠದ ಗದ್ದೆಯಲ್ಲಿ ಪತ್ರಕರ್ತರು ಮತ್ತು ಮಹಿಳೆಯರು ನಾಟಿ ಮಾಡಿದರು.