ಮಂಗಳೂರು: ಕಪಾಲ ಬೆಟ್ಟದ ವಿಚಾರದಲ್ಲಿ ಕಲ್ಲಡ್ಕ ಪ್ರಭಾಕರ ಭಟ್ ಅವರು ಏಸುಕ್ರಿಸ್ತನ ನಾಡು ಇದಲ್ಲ, ಕೃಷ್ಣನ ನಾಡು ಎಂಬ ಹೇಳಿಕೆಗೆ ವಿಧಾನ ಪರಿಷತ್ ಶಾಸಕ ಐವನ್ ಡಿಸೋಜ ತಿರುಗೇಟು ನೀಡಿದ್ದಾರೆ.
ಮಂಗಳೂರು ಮನಪಾದಲ್ಲಿರುವ ತಮ್ಮ ಕಚೇರಿಯಲ್ಲಿ ಮಾತನಾಡಿದ ಅವರು, ಕಪಾಲ ಬೆಟ್ಟದ ವಿಚಾರದಲ್ಲಿ ಕಲ್ಲಡ್ಕ ಪ್ರಭಾಕರ ಭಟ್ ಅವರು ಏಸುಕ್ರಿಸ್ತನ ನಾಡು ಇದಲ್ಲ, ಕೃಷ್ಣನ ನಾಡು ಎಂದಿದ್ದಾರೆ. ನಮಗೆ ಇದರಿಂದ ಮಾನಸಿಕವಾಗಿ ನೋವಾಗಿದೆ. ಕಪಾಲ ಬೆಟ್ಟದಲ್ಲಿ ಏಸು ಪ್ರತಿಮೆ ನಿರ್ಮಾಣ ಅಕ್ರಮ ಎಂದಾದರೆ, ರಾಜ್ಯ ಹಾಗೂ ಕೇಂದ್ರದಲ್ಲಿ ನಿಮ್ಮದೇ ಸರ್ಕಾರವಿದೆ. ನೀವು 'ಕನಕಪುರ ಚಲೋ' ಮಾಡುವ ಬದಲು 'ವಿಧಾನಸಭಾ ಚಲೋ' ಮಾಡಬಹುದಿತ್ತು ಎಂದು ಪ್ರಭಾಕರ ಭಟ್ಟರಿಗೆ ಐವನ್ ಡಿಸೋಜ ತಿರುಗೇಟು ನೀಡಿದ್ರು.
ಭಾರತ, ಈ ದೇಶದ ಎಲ್ಲಾ ಪ್ರಜೆಗಳದ್ದು. ದೇವರಿಗೆ ಯಾವುದೇ ಜಾಗ, ಆಸ್ತಿ ಬೇಕಿಲ್ಲ. ಪ್ರಭಾಕರ ಭಟ್ಟರು ಡಿಕೆಶಿಯವರನ್ನು ರಾಜಕೀಯವಾಗಿ ಟಾರ್ಗೆಟ್ ಮಾಡಿ, ಪ್ರತಿಭಟನೆ ನಡೆಸುತ್ತಿದ್ದಾರೆ. ಕ್ರೈಸ್ತರು ಈ ದೇಶದಲ್ಲಿ ಅಲ್ಪಸಂಖ್ಯಾತರಾಗಿದ್ದರೂ ಅವರ ಕೊಡುಗೆ ಅಪಾರವಾಗಿದೆ ಎಂದು ಹೇಳಿದರು.
ಇನ್ನು ಕಲ್ಲಡ್ಕ ಪ್ರಭಾಕರ ಭಟ್ ಅವರು ಪರಧರ್ಮ ಸಹಿಷ್ಣುತೆ, ಮಾನವೀಯತೆ, ಅನ್ಯೋನ್ಯತೆಯನ್ನು ಬೆಳೆಸಿಕೊಳ್ಳಲು ಸೋತಿದ್ದಾರೆ. ಅವರು ಈ ದೇಶದ ಸಂವಿಧಾನವನ್ನು ಓದುವುದು ಒಳಿತು. ದೇಶದ ಪ್ರಧಾನಿ ಮೋದಿಯವರು ಬಾಂಗ್ಲಾದೇಶ, ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನಗಳಿಂದ ಬರುವವರಿಗೆ ಪೌರತ್ವ ನೀಡುತ್ತೇವೆ ಎಂದು ಹೇಳುತ್ತಾರೆ. ಆದರೆ ಕಲ್ಲಡ್ಕ ಪ್ರಭಾಕರ ಭಟ್ ಅವರು, ನಿಮಗೆ ಬೇರೆ ದೇಶ ಇದೆ. ಆದರೆ ಪ್ರಭಾಕರ ಭಟ್ಟರು ಅನಾವಶ್ಯಕವಾಗಿ ಗೊಂದಲ ನಿರ್ಮಾಣ ಮಾಡಲು ಹೋಗುತ್ತಿದ್ದಾರೆ. ಇದರ ಮೂಲಕ ಎಲ್ಲರಿಗೂ ಮಾನಸಿಕ ವೇದನೆ ನೀಡಿದ್ದೀರಿ ಎಂದು ಐವನ್ ಡಿಸೋಜ ಅವರು ಪ್ರಭಾಕರ ಭಟ್ ವಿರುದ್ಧ ಹರಿಹಾಯ್ದರು.