ಮಂಗಳೂರು: ನಗರದಲ್ಲಿ ಡಿಸೆಂಬರ್ 19 ರಂದು ನಡೆದ ಗೋಲಿಬಾರ್ಗೆ ಸಂಬಂಧಿಸಿದಂತೆ ಮಿನಿ ವಿಧಾನಸೌಧದ ಕಟ್ಟಡದಲ್ಲಿರುವ ಸಹಾಯಕ ಆಯುಕ್ತರ ಕೋರ್ಟ್ ಹಾಲ್ನಲ್ಲಿ ಇಂದು ವಿಚಾರಣೆ ನಡೆಯಿತು. ಇಂದು ಎರಡು ಮಂದಿ ಹಾಜರಾಗಿ ಲಿಖಿತ ಸಾಕ್ಷಿ ನೀಡಿದ್ದು, ಒಬ್ಬರು ಮೊಬೈಲ್ ವಿಡಿಯೋ ತುಣುಕು ಹಾಜರುಪಡಿಸಿದ್ದಾರೆ.
ಮ್ಯಾಜಿಸ್ಟೀರಿಯಲ್ ತನಿಖಾಧಿಕಾರಿ ಜಿ.ಜಗದೀಶ್ ಅವರ ಸಮಕ್ಷಮದಲ್ಲಿ ಘಟನೆಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಸಾಕ್ಷಿ ವಿಚಾರಣೆ ನಡೆದಿದೆ. ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಜಿ.ಜಗದೀಶ್, ಪೊಲೀಸ್ ಆಯುಕ್ತರಿಗೂ ಸಿಸಿಟಿವಿ ಫೂಟೇಜ್ ಹಾಗೂ ವಿಡಿಯೋ ದಾಖಲೆಗಳನ್ನು ಹಾಜರುಪಡಿಸಲು ತಿಳಿಸಿದ್ದೆವು. ಇಂದು 50 ವಿಡಿಯೋ ತುಣುಕುಗಳಿದ್ದ ಒಂದು ಪೆನ್ ಡ್ರೈವ್ ಅನ್ನು ಹಾಜರುಪಡಿಸಿದ್ದಾರೆ. ಅದರ ಜೊತೆಗೆ ತನಿಖೆಗಾಗಿ ವಶಪಡಿಸಿಕೊಂಡಿರುವ 23 ಡಿವಿಆರ್‌ಗಳನ್ನು ನ್ಯಾಯಾಲಯಕ್ಕೆ ನೀಡಿದ್ದಾರೆ. ಅದರ ಸ್ವೀಕೃತಿ ಪತ್ರವನ್ನು ಇಂದು ಮ್ಯಾಜಿಸ್ಟ್ರೇಟ್ ಕೋರ್ಟ್ಗೆ ಹಾಜರು ಪಡಿಸಿದ್ದಾರೆ. ಇನ್ನೂ ಯಾರಾದರು ಈ ಬಗ್ಗೆ ಸಾಕ್ಷಿ ಹೇಳುವವರು, ವಿಡಿಯೋ ದಾಖಲೆಗಳನ್ನು ಹಾಜರು ಪಡಿಸುವವರು ಫೆ.19 ರಂದು ದಾಖಲಿಸಬಹುದು ಎಂದು ಹೇಳಿದರು.
ಈವರೆಗೆ 201 ಮಂದಿ ಸಾಕ್ಷಿ ಹೇಳಿದ್ದರು. ಇಂದು ಎರಡು ಮಂದಿ ಸೇರಿ ಒಟ್ಟು 203 ಸಾಕ್ಷಿ ಹೇಳಿದ್ದಾರೆ. ಪ್ರಕರಣದ ಬಗ್ಗೆ ಹೈಕೋರ್ಟ್ನಲ್ಲಿ ಫೆ.24 ರಂದು ಮತ್ತೆ ವಿಚಾರಣೆ ನಡೆಯಲಿದೆ. ಅಂದು ನಾನು ರಿಪೋರ್ಟ್ ಹಾಜರುಪಡಿಸುತ್ತೇನೆ. ಇಂದು ಸರೋಜಿನಿ ಮಹಿಷಿ ವರದಿ ಜಾರಿಯ ಹಿನ್ನೆಲೆಯಲ್ಲಿ ಕರ್ನಾಟಕ ಬಂದ್ ಇದ್ದ ಕಾರಣ ಸಿಸಿಟಿವಿ ಫೂಟೇಜ್ ಹಾಗೂ ವಿಡಿಯೋ ದಾಖಲೆಗಳನ್ನು ಹಾಜರುಪಡಿಸಲು ತೊಂದರೆಯಾಗಿರುವ ಹಿನ್ನೆಲೆಯಲ್ಲಿ ಫೆ.19 ರಂದು ಬೆಳಿಗ್ಗೆ 11ರಿಂದ ಮಧ್ಯಾಹ್ನ 1ರವರೆಗೆ ಹಾಜರುಪಡಿಸಲು ಕೋರಲಾಗಿದೆ. ಬೇರೆ ಎಲ್ಲಿಂದಲೋ ಲಭ್ಯವಾದ ವಿಡಿಯೋ ದಾಖಲೆಗಳನ್ನು ಪಡೆಯಲಾಗುವುದಿಲ್ಲ. ವಿಡಿಯೋವನ್ನು ದಾಖಲೆ ಮಾಡುವ ವ್ಯಕ್ತಿಯೇ ಸ್ವತಃ ವಿಡಿಯೋ ಚಿತ್ರೀಕರಣ ಮಾಡಿರಬೇಕು. ಅಥವಾ ಸ್ವತಃ ಅವರ ಮನೆಯ ಡಿವಿಆರ್ ಅನ್ನು ದಾಖಲಿಸಬಹುದು ಎಂದರು.