ಮಂಗಳೂರು: ಕರ್ನಾಟಕದ ಮೊದಲ ಟವಿ(tavi) ಶಸ್ತ್ರಚಿಕಿತ್ಸೆ ಮಾಡುವ ಮೂಲಕ ನಗರದ ಇಂಡಿಯಾನ ಆಸ್ಪತ್ರೆ ಮತ್ತೊಂದು ಮೈಲಿಗಲ್ಲು ಸಾಧನೆ ಮಾಡಿದೆ.
ಹೃದಯ ಶಸ್ತ್ರಚಿಕಿತ್ಸೆಯಲ್ಲಿ ಹೊಸ ವಿಧಾನವಾದ ಟವಿ ಪರಿಚಯವಾಗಿ ಹತ್ತು ವರುಷಗಳಾಗಿದ್ದು, ಈ ಚಿಕಿತ್ಸಾ ವಿಧಾನ ಭಾರತದಲ್ಲಿ ಪ್ರಸಿದ್ದ ಆಸ್ಪತ್ರೆಗಳಲ್ಲಿ ಕಳೆದೆರಡು ವರ್ಷಗಳಿಂದ ಲಭ್ಯವಿದೆ. ಕರ್ನಾಟಕದಲ್ಲಿ ಮೊದಲ ಬಾರಿಗೆ ಮಂಗಳೂರಿನ ಇಂಡಿಯಾನ ಆಸ್ಪತ್ರೆ ಈ ಶಸ್ತ್ರಚಿಕಿತ್ಸೆ ಮಾಡಿ ಯಶಸ್ವಿಯಾಗಿದೆ. ಮಡಿಕೇರಿಯ ಸ್ಯಾಮ್ಯುಯೆಲ್ ಡೇನಿಯಲ್ ಎಂಬುವರಿಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆ ನಡೆಸದೆ ಟವಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ.
ಸ್ಯಾಮ್ಯುಯೆಲ್ ಅವರಿಗೆ ಈ ಹೊಸ ವಿಧಾನದ ಶಸ್ತ್ರಚಿಕಿತ್ಸೆ ಬಗ್ಗೆ ಮನವರಿಕೆ ಮಾಡಿ ಚಿಕಿತ್ಸೆ ನೀಡಲಾಗಿದೆ. ಭಾರತದಲ್ಲಿ ತಯಾರಾದ ಕವಾಟವನ್ನು ಬಳಸಿ ಸುಮಾರು 15 ಲಕ್ಷ ರೂ ವೆಚ್ಚ ಶಸ್ತ್ರಚಿಕಿತ್ಸೆಗೆ ತಗುಲಿದ್ದು, ವಿದೇಶದ ಕವಾಟವಾದರೆ ದರ ದುಪ್ಪಟ್ಟು ಇದೆ. ಶಸ್ತ್ರಚಿಕಿತ್ಸೆ ಯಿಂದ ಸಾಕಷ್ಟು ಪ್ರಯೋಜನವಾಗಿದೆ ಎಂದು ಹೇಳುವ ರೋಗಿ, ಕವಾಟದ ಮೇಲಿನ ತೆರಿಗೆ ಇಳಿಸಿ ಸರ್ಕಾರ ಎಲ್ಲಾ ರೋಗಿಗಳಿಗೂ ಅನುಕೂಲ ಮಾಡಬೇಕೆಂದು ಒತ್ತಾಯಿಸಿದ್ದು ಈ ಬಗ್ಗೆ ಪ್ರಧಾನಮಂತ್ರಿಗೂ ಪತ್ರ ಬರೆಯುವುದಾಗಿ ತಿಳಿಸಿದ್ದಾರೆ.ವಯಸ್ಸಾದ ಹೃದಯ ರೋಗಿಗಳಿಗೆ ಚಿಕಿತ್ಸೆ ನೀಡುವಲ್ಲಿ ಪ್ರಪಂಚಾದ್ಯಂತ ಟವಿ ಕ್ರಾಂತಿ ಮಾಡಿದೆ. ಈ ವಿಧಾನದಲ್ಲಿ ಚಿಕಿತ್ಸಾ ವೆಚ್ಚ ಹೆಚ್ಚಾಗಿರುವುದರಿಂದ ಬಡಜನರಿಗೆ ಇದರ ಪ್ರಯೋಜನ ಪಡೆಯಲು ಅನಾನುಕೂಲವಾಗಿದ್ದು ಸರ್ಕಾರ ಈ ನಿಟ್ಟಿನಲ್ಲಿ ಚಿಂತಿಸಬೇಕಾಗಿದೆ