ಮಂಗಳೂರು: ವಿಶ್ವವನ್ನೇ ತಲ್ಲಣಗೊಳಿಸಿರುವ ಕೋವಿಡ್ ಸೋಂಕನ್ನು ನಿಯಂತ್ರಣ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ 12,56,821 ಜನರಿಗೆ ಉಚಿತ ಲಸಿಕೆ ನೀಡಲಾಗಿದೆ. ಜಿಲ್ಲಾ ವೆನ್ಲಾಕ್ ಆಸ್ಪತ್ರೆಯನ್ನು ಸೂಪರ್ ಸ್ಪೆಷಾಲಿಟಿಯಾಗಿ ಮೇಲ್ದರ್ಜೆಗೇರಿಸಲಾಗಿದೆ. ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಉನ್ನತೀಕರಿಸಲಾಗಿದೆ ಎಂದು ಸಚಿವ ಅಂಗಾರ ಎಸ್. ಹೇಳಿದರು.
ಜನರ ಆರೋಗ್ಯಕ್ಕೆ ಪ್ರಥಮ ಆದ್ಯತೆ:
ದ.ಕ. ಜಿಲ್ಲಾಡಳಿತದ ವತಿಯಿಂದ ನಗರದ ನೆಹರೂ ಮೈದಾನದಲ್ಲಿ ಹಮ್ಮಿಕೊಂಡಿದ್ದ 75ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. 3.09 ಕೋಟಿ ರೂ. ವೆಚ್ಚದಲ್ಲಿ ಐಸಿಯು ಬೆಡ್ ವ್ಯವಸ್ಥೆ ಮಾಡಲಾಗಿದೆ. ಮಕ್ಕಳಿಗಾಗಿ ಸ್ಪೆಷಲ್ ಬ್ಲಾಕ್, 132 ವೆಂಟಿಲೇಟರ್, 500 ಬೆಡ್ ಆಕ್ಸಿಜನ್ ಸೆಂಟರ್ ವ್ಯವಸ್ಥೆ ಆಗಿದೆ. ಜನೌಷಧಿ ಕೇಂದ್ರಗಳ ಮೂಲಕ ಜನತೆಯ ಆರೋಗ್ಯಕ್ಕೆ ಪ್ರಥಮ ಆದ್ಯತೆ ನೀಡಲಾಗಿದೆ. ಪ್ರಧಾನಿಯವರ ಅಪೇಕ್ಷೆಯಂತೆ ನಾವು ಅಮೃತ ಮಹೋತ್ಸವ ಆಚರಣೆಯ ಅಮೃತ ಘಳಿಗೆಯಲ್ಲಿ ಇದ್ದೇವೆ ಎಂದು ಹೇಳಿದರು.
ಪ್ರಧಾನಿಯ ಮಾರ್ಗದರ್ಶನ ಹಾಗೂ ನೂತನ ಸಿಎಂ:
ಸಿಎಂ ಬಸವರಾಜ ಬೊಮ್ಮಾಯಿಯವರ ಆಡಳಿತದಲ್ಲಿ, ರಾಜ್ಯದಲ್ಲಿ ಅನೇಕ ಅಭಿವೃದ್ಧಿ ಕಾರ್ಯ ಹಾಗೂ ಸಾಮಾಜಿಕ ಚಟುವಟಿಕೆಗಳಿಗೆ ಚೈತನ್ಯ ತುಂಬುವ ಸ್ಥಿತಿ ನಿರ್ಮಾಣವಾಗಿದೆ. ನಮ್ಮ ಜಿಲ್ಲೆಯಲ್ಲಿ ಹಡಿಲು ಬಿದ್ದಿರುವ ಭೂಮಿಯಲ್ಲಿ ಭತ್ತ ಬೆಳೆಯುವ ಹೊಸ ಆಂದೋಲನ ನಡೆಯುತ್ತಿದೆ. ಜೊತೆಗೆ ರೈತರಿಗೆ ಬೇಕಾಗುವ ಗೊಬ್ಬರ, ಬಿತ್ತನೆ ಬೀಜ, ಕೃಷಿ ಯಂತ್ರೋಪಕರಣಗಳನ್ನು ನೀಡಲಾಗಿದೆ. ಈ ಮೂಲಕ ಸಾವಯುವ ಕೃಷಿ ಪರಂಪರಗೆ ಒತ್ತು ನೀಡಲಾಗುತ್ತಿದೆ. ಅಲ್ಲದೇ ಕ್ರಾಂತಿಕಾರಿ ನಿಲುವುಗಳ ಮೂಲಕ ಕೃಷಿಕರಿಗೆ ಶಕ್ತಿ ತುಂಬುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಸಚಿವ ಅಂಗಾರ ವಿವರಿಸಿದರು.
ಇದನ್ನೂ ಓದಿ: ಹೈ-ಕ ಭಾಗದಲ್ಲಿ ಮನೆ ಮಾಡಿದ 75ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ